ಹಾಸನ: ಕೊಟ್ಟ ಸಾಲವನ್ನು ವಾಪಸ್ ಕೇಳಿದ್ದಕ್ಕೆ ಸ್ನೇಹಿತನನ್ನೇ ಹೆಣವಾಗಿಸಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಲಿಖಿತ್ ಗೌಡ ಕೊಲೆಯಾದ ವ್ಯಕ್ತಿ. ಭಾನುವಾರ ಸಂಜೆಯಿಂದ ಕೊಲೆಯಾದ ಲಿಖಿತ್ ಗೌಡ ನಾಪತ್ತೆಯಾಗಿದ್ದ. ಪೋಷಕರು ಮಗನನ್ನು ಅಪಹರಣ ಮಾಡಲಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ನಾಪತ್ತೆಯಾಗಿದ್ದ ಮಗ ಶವವಾಗಿ ಪತ್ತೆಯಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಏನಿದು ಪ್ರಕರಣ?: ಕೊಲೆಯಾದ ವ್ಯಕ್ತಿ ಲಿಖಿತ್ ಗೌಡ ಕಾರ್ ಕ್ಲಿನಿಕ್ ನಡೆಸುತ್ತಿದ್ದ. ಈತ ಇತ್ತೀಚೆಗೆ ಪರಿಚಯವಾಗಿದ್ದ ನವೀನ್ ಎಂಬ ವ್ಯಕ್ತಿ 2.5 ಲಕ್ಷ ಹಣ ಸಾಲದ ರೂಪದಲ್ಲಿ ನೀಡಿದ್ದನು ಎನ್ನಲಾಗಿದೆ. ನವೀನ್ ಬಳಿ ಲಿಖಿತ್ ಹಲವು ಬಾರಿ ಕೊಟ್ಟ ಹಣವನ್ನು ಹಿಂತಿರುಗಿಸುವಂತೆ ಕೇಳಿದ್ದಾನೆ. ಪ್ರತೀ ಬಾರಿ ಕೇಳಿದಾಗಲೂ ನವೀನ್ ಇಂದು, ನಾಳೆ ಕೊಡುತ್ತೇನೆ ಎಂದು ಸಬೂಬು ಹೇಳಿಕೊಂಡು ದಿನ ದೂಡುತ್ತಿದ್ದನು. ಸಾಲದ ಹಣವನ್ನು ವಾಪಸ್ ನೀಡುವಂತೆ ಲಿಖಿತ್ ಗೌಡ ಕೇಳಿದಾಗ ಸದ್ಯ ನನ್ನ ಬಳಿ ಹಣವಿಲ್ಲ, ನಾನು ಕೊಟ್ಟಾಗ ಇಸ್ಕೋಬೇಕು ಎಂದು ನವೀನ್ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಹಣ ನೀಡಲು ಹಿಂದೇಟು ಹಾಕುತ್ತಿದ್ದ ನವೀನ್ ಮೇಲೆ ಕೋಪಗೊಂಡ ಲಿಖಿತ್ 10 ಲಕ್ಷದ ಚೆಕ್ ಬೌನ್ಸ್ ಕೇಸ್ ಹಾಕಿ, ಆ್ಯಕ್ಟಿವಾ ಹೋಂಡಾ ಬೈಕ್ ಸೀಸ್ ಮಾಡಿಕೊಂಡು ಬಂದಿದ್ದ ಎಂಬ ಮಾತಿದೆ. ಇದರಿಂದ ಕೋಪಗೊಂಡಿದ್ದ ನವೀನ್ ಲಿಖಿತ್ನನ್ನು ಕೊಲೆ ಮಾಡಲು ನಿರ್ಧರಿಸಿದ್ದನು. ಭಾನುವಾರ ಸಂಜೆ ನವೀನ್ ತನ್ನ ವಾಹನವನ್ನು ವಾಶ್ ಮಾಡಿಸಿಕೊಳ್ಳಲು ಕಾರ್ ಕ್ಲಿನಿಕ್ಗೆ ಬಂದಿದ್ದು, ಈ ವೇಳೆ ಲಿಖಿತ್ಗೆ ಕರೆ ಮಾಡಿ ಹಣ ವಾಪಸ್ ಕೊಡುವುದಾಗಿ ಹೇಳಿ, ಕ್ಲಿನಿಕ್ಗೆ ಬರುವಂತೆ ತಿಳಿಸಿದ್ದಾನೆ.
ಹಣ ಹಿಂದಿರುಗಿಸುತ್ತಾನೆ ಎನ್ನುವ ಆಸೆಯಲ್ಲಿ ಲಿಖಿತ್ ಗೌಡ (ಬಂಗಾರಿ) ಮನೆಯಿಂದ ತನ್ನ ಕಾರ್ ಕ್ಲಿನಿಕ್ಗೆ ಹೋಗಿದ್ದಾನೆ. ಈ ವೇಳೆ ಹಣ ಕೊಡುವುದಾಗಿ ಹೇಳಿ ಕಾರ್ನಲ್ಲಿ ತನ್ನ ಗೆಳೆಯ ಸಾಗರ್ ಸಹಾಯದೊಂದಿಗೆ ನವೀನ್, ಲಿಖಿತ್ ಗೌಡನನ್ನು ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದಾನೆ. ಹಾಸನ ಬೆಂಗಳೂರು ಮಾರ್ಗವಾಗಿ ಹೊರಟು ಮಧ್ಯ ಭಾಗದಲ್ಲಿ ಎಲ್ಲರ ಮೊಬೈಲನ್ನು ಸ್ವಿಚ್ಡ್ ಆಫ್ ಮಾಡಿಸಿ ನಂತರ ಹಾಸನ ತಾಲೂಕಿನ ದುದ್ದ ಸಮೀಪದ ಯೋಗಿಹಳ್ಳಿ ಫಾರೆಸ್ಟ್ ಏರಿಯಾದಲ್ಲಿ ಕೊಲೆ ಮಾಡಿದ್ದಾನೆ ಎಂದು ಲಿಖಿತ್ ತಂದೆ ನಾಗೇಶ್ ಗೌಡ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪೋಷಕರು ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೋಷಕರು ನೀಡಿದ ದೂರಿನ ಅನ್ವಯ ಕಿಡ್ನ್ಯಾಪ್ ಮಾಡಿದವರನ್ನು ನವೀನ್ ಮತ್ತು ಸಾಗರ್ ಎಂದು ಗುರುತಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಹಾಸನ ಬಡಾವಣೆ ಪೊಲೀಸರು ತನಿಖೆ ಕೈಗೊಂಡಿದ್ದರು. ಈ ವೇಳೆ, ಯೋಗಿಹಳ್ಳಿ ಫಾರೆಸ್ಟ್ ಏರಿಯಾದಲ್ಲಿ ಲಿಖಿತ್ ಗೌಡ ಶವ ಪತ್ತೆಯಾಗಿದೆ. ಎಂಟು ತಿಂಗಳ ಹಿಂದೆಯಷ್ಟೆ ಲಿಖಿತ್ ಗೌಡ ಅವರಿಗೆ ಮದುವೆಯಾಗಿತ್ತು. ಸ್ವಂತ ಕಾರ್ ಕ್ಲಿನಿಕ್ ಪ್ರಾರಂಭಿಸಿ ಒಂದು ವರ್ಷವೂ ಆಗಿರಲಿಲ್ಲ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಆರೋಪಿಗಳ ಎಡೆಮುರಿ ಕಟ್ಟಲು ಈಗಾಗಲೇ ಎರಡು ತಂಡ ರಚನೆ ಮಾಡಿದ್ದಾರೆ.
ಇದನ್ನೂ ಓದಿ: ಹೂತು ಹಾಕಿದ ಶವವನ್ನು 23 ದಿನಗಳ ಬಳಿಕ ಹೊರತೆಗೆದ ಪೊಲೀಸರು