ಹಾಸನ: ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಮಾಡಿಕೊಳ್ಳಲಾಗಿರುವ ಸಿದ್ಧತೆ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ಪಡೆದರು.
ನಗರದ ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಪೂರ್ವ ಸಿದ್ಧತೆ ಬಗ್ಗೆ ಸಭೆಯಲ್ಲಿ ಸುರೇಶ್ ಕುಮಾರ್ ಮಾತನಾಡಿ, ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ವಿಚಿತ್ರವಾದ ಸನ್ನಿವೇಶದಲ್ಲಿ ನಡೆಸಲಾಗುತ್ತಿದೆ. ಈಗಾಗಲೇ ಸಿದ್ಧತೆ ಬಗ್ಗೆ ಸೂಚನೆಯನ್ನು ಕಳುಹಿಸಲಾಗಿದ್ದು, ಪರೀಕ್ಷೆಗಳು ಇನ್ನೇನು ಹತ್ತಿರದಲ್ಲಿವೆ ಎಂದರು.
ಪರೀಕ್ಷೆಯ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಪ್ರತಿ ವಿದ್ಯಾರ್ಥಿಯು ಮಾಸ್ಕ್ ಧರಿಸಬೇಕು. ಆಯಾ ಕೇಂದ್ರಗಳಲ್ಲಿ ಸ್ಯಾನಿಟೈಸರ್ ಬಳಸಬೇಕು. ಜೊತೆಗೆ ಉಪನ್ಯಾಸಕರು ಕೂಡ ಕಾನೂನನ್ನು ಪಾಲಿಸಿ ವಿದ್ಯಾರ್ಥಿಗಳಿಗೆ ಯಾವ ತೊಂದರೆ ಆಗದಂತೆ ನಿಗಾವಹಿಸಬೇಕು ಎಂದು ಸಲಹೆ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪ್ರಕಾಶ್ ಮಾತನಾಡಿ, ಈ ವರ್ಷ ಜಿಲ್ಲೆಯಲ್ಲಿ 21,010 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 86 ಪರೀಕ್ಷಾ ಕೇಂದ್ರಗಳಿದ್ದು, ಹೊಸದಾಗಿ 19,842 ವಿದ್ಯಾರ್ಥಿಗಳಿದ್ದಾರೆ. 556 ಫೇಲಾದ ವಿದ್ಯಾರ್ಥಿಗಳಿದ್ದಾರೆ ಎಂದು ಹೇಳಿದರು.
ಈಗಾಗಲೇ ಎಲ್ಲ ತಾಲೂಕು ಶಿಕ್ಷಣ ಅಧಿಕಾರಿಗಳ ಸಭೆ ಕರೆದು ಯಶಸ್ವಿಯಾಗಿ ಪರೀಕ್ಷೆ ನಡೆಸುವುದರ ಬಗ್ಗೆ ಚರ್ಚೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿನ ಕೊಠಡಿ, ಸಮಸ್ಯೆಗಳ ಬಗ್ಗೆ ಮಾಹಿತಿ ಕಲೆಹಾಕಲಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಎ ಪರಮೇಶ್, ಶಾಸಕ ಪ್ರೀತಮ್ ಜೆ. ಗೌಡ, ಸಿ.ಎನ್. ಬಾಲಕೃಷ್ಣ, ಗೋಪಾಲಸ್ವಾಮಿ ಇತರರು ಹಾಜರಿದ್ದರು.