ಹಾಸನ: ನನಗೆ ಪೂರ್ವನಿರ್ಧರಿತ ಬೇರೆ ಕಾರ್ಯಕ್ರಮ ಇದ್ದುದರಿಂದ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ ಹೇಳಿದರು. ಜೆಡಿಎಸ್‌ನ ಮಾಜಿ ಶಾಸಕರ ಕಾಂಗ್ರೆಸ್ ಸೇರ್ಪಡೆ ಬಗ್ಗೆ ನಗರದಲ್ಲಿ ಬುಧವಾರ ಪ್ರತಿಕ್ರಿಯೆ ನೀಡಿದ ಅವರು, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರು ಫೋನ್ ಮಾಡಿ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ಇದೆ, ಕೆಪಿಸಿಸಿ ಅಧ್ಯಕ್ಷರು ಬರುವುದಕ್ಕೆ ಹೇಳಿದ್ದಾರೆ, ಬನ್ನಿ ಅಂತ ನನ್ನನ್ನು ಕರೆದಿದ್ದರು. ಆಯ್ತು ಬರುವೆ ಅಂತಲೂ ಹೇಳಿದ್ದೆ. ಆದರೆ, ಬೇರೆ ಕಾರ್ಯಕ್ರಮ ಇದ್ದುದರಿಂದ ಅಲ್ಲಿಗೆ ಹೋಗಲು ಆಗಲಿಲ್ಲ ಎಂದರು.
ಜೆಡಿಎಸ್‌ನ ಮಾಜಿ ಶಾಸಕರುಗಳಾದ ಗೌರಿಶಂಕರ್ ಹಾಗೂ ಮಂಜುನಾಥ್ ಅವರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ನನ್ನನ್ನು ಸೇರಿದಂತೆ ಜಿಲ್ಲೆಯ ಯಾವೊಬ್ಬ ಮುಖಂಡರ ಬಳಿಯೂ ಚರ್ಚೆ ಮಾಡಿಲ್ಲ. ಇಂತವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಅಂತ ನನಗೆ ಮಧ್ಯಮದ ಮೂಲಕವೇ ಗೊತ್ತಾಯಿತು. ಈ ಬಗ್ಗೆ ಕಾಂಗ್ರೆಸ್ನ ಯಾವುದೇ ನಾಯಕರು ನಮ್ಮ ಜೊತೆ ಸಮಾಲೋಚನೆ ಮಾಡಿಲ್ಲ. ಸಚಿವ ಜಿ ಪರಮೇಶ್ವರ್ ಆಗಲಿ, ನನಗಾಲಿ, ನಮ್ಮ ಜಿಲ್ಲೆಯ ಶಾಸಕರುಗಳಿಗಾಗಲಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗಾಗಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗಾಗಲಿ ಯಾರೂ ಕೂಡ ಬಂದು ಈ ರೀತಿ ಇದೆ, ಪಕ್ಷಕ್ಕೆ ಸೇರಿಸಿಕೊಳ್ಳಬೇಕಾ, ಬಿಡಬೇಕಾ ಅಂತ ಕೇಳಲೇ ಇಲ್ಲ. ಆದರೆ, ಸೇರಿಸಿಕೊಂಡಿದ್ದರೆ ಸಂತೋಷ. ಈ ಬಗ್ಗೆ ನಮಗೆ ಯಾವುದೇ ಅಸಮಾಧಾನ ಇಲ್ಲ. ಕಾಂಗ್ರೆಸ್ ಪಕ್ಷ ಒಂದು ರೀತಿ ಸಮುದ್ರ ಇದ್ದಂತೆ. ಸಮುದ್ರಕ್ಕೆ ಗಂಗೆ ನೀರು ಬರುತ್ತೆ, ಪಕ್ಕದಲ್ಲಿರುವ ಚರಂಡಿ ನೀರು ಬರುತ್ತೆ. ಸಮುದ್ರದಲ್ಲಿ ವಿಷನೂ ಇದೆ, ಅಮೃತನೂ ಇದೆ. ವಿಷ ಸಿಗೋರಿಗೆ ವಿಷ ಸಿಗುತ್ತೆ, ಅಮೃತ ಸಿಗೋರಿಗೆ ಅಮೃತ ಸಿಗುತ್ತೆ. ನಮ್ಮ ಜಿಲ್ಲೆ ರಾಜಕಾರಣ ಏನೇ ಇದ್ದರೂ ಎಂತಹ ಸಂದರ್ಭ ಬಂದರೂ ನಿಭಾಯಿಸುವ ಶಕ್ತಿಯನ್ನು ನಮ್ಮ ಜಿಲ್ಲೆಯ ಜನ ನನಗೆ ಕೊಟ್ಟಿದ್ದಾರೆ ಎಂದರು.
ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಇಂಗಿತ ಇದೆ. ಈ ಬಗ್ಗೆ ಟಿಕೆಟ್ ಕೂಡ ಕೇಳಿರುವೆ. ಲೋಕಸಭೆನಲ್ಲಿ ಒಂದು ಅವಕಾಶ ಸಿಕ್ಕರೆ ನಮ್ಮ ಜಿಲ್ಲೆಯಿಂದ ಪ್ರತಿನಿಧಿಸಬೇಕು ಅಂತ ಇದ್ದೇನೆ. ನನ್ನ ಅನಿಸಿಕೆಯನ್ನು ಹೈಕಮಾಂಡ್ ಮುಂದೆ ಈಗಾಗಲೇ ಮಂಡಿಸಿದ್ದೇನೆ. ಹೈಕಮಾಂಡ್‌ನವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಅವರು ನಿಲ್ಲು ಎಂದರೆ ನಿಲ್ಲುತ್ತೇನೆ. ಮಂತ್ರಿಯಾಗಿರು ಅಂದ್ರೆ ಮಂತ್ರಿಯಾಗಿ ಇರ್ತಿನಿ. ಮುದ್ದ ಹನುಮೇಗೌಡರು ಪಕ್ಷಕ್ಕೆ ಬರ್ತಾರೆ ಅನ್ನೋದನ್ನು ಖಚಿತವಾಗಿ ಹೇಳಲು ಆಗಲ್ಲ. ಅವರ ಬಹಳಷ್ಟು ಸ್ನೇಹಿತರು ಬರುವ ಇಂಗಿತವನ್ನು ತೋರಿಸಿದ್ದಾರೆ. ಬಂದೋರೆಲ್ಲಾ ಆಕಾಂಕ್ಷಿಗಳಿರುತ್ತಾರೆ ಎಂದು ವ್ಯಂಗ್ಯವಾಗಿ ಮಾತನಾಡಿದರು.
ಇದನ್ನೂ ಓದಿ: ಡಿಕೆಶಿ ಸಿಎಂ ಆಗುವುದಾದರೆ ಜೆಡಿಎಸ್ ಶಾಸಕರ ಬೆಂಬಲ, ಹೆಚ್ಡಿಕೆ ಮಾತು ನಂಬಲು ನಾವೇನು ದಡ್ಡರೇ?: ಡಿಸಿಎಂ ಇದನ್ನೂ ಓದಿ: ಜೆಡಿಎಸ್ ಸ್ವರೂಪದಲ್ಲಿ ರಾಜಕೀಯ ಪಕ್ಷವೇ ಅಲ್ಲ, ಅದು ಕುಟುಂಬಕ್ಕೆ ಸೀಮಿತ : ಸಿಎಂ ಸಿದ್ದರಾಮಯ್ಯ |
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಗೌರಿಶಂಕರ್ ಮತ್ತು ದಾಸರಹಳ್ಳಿ ಮಂಜುನಾಥ್ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಸೇರ್ಪಡೆಗೊಂಡರು. ಈ ಇಬ್ಬರು ನಾಯಕರನ್ನು ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ಗೆ ಬರಮಾಡಿಕೊಂಡರು.