ಹಾಸನ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರದ ಒಂದು ವರ್ಷದ ಸಾಧನಾ ಸಮಾರಂಭ ನಗರಸಭೆಯ ಕುವೆಂಪು ಸಭಾಂಗಣದಲ್ಲಿ ನಡೆದಿದ್ದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಭಾಗಿಯಾಗಿದ್ದರು.
ಬಳಿಕ ಸುದ್ದಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ಜನಸಾಮಾನ್ಯರ ಪ್ರಾಣ ಮುಖ್ಯ. ಹೀಗಾಗಿ ಪ್ರಗತಿಯಲ್ಲಿದ್ದ ಅಭಿವೃದ್ಧಿ ಕಾರ್ಯಗಳು ಹಾಗೆಯೇ ಉಳಿದಿದ್ದು, ಮುಂದಿನ ದಿನಗಳಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸೋಂಕಿತರಿಗಾಗಿ ಕೋವಿಡ್ ಆಸ್ಪತ್ರೆಯಲ್ಲಿ 400 ಬೆಡ್, ಎಸ್.ಡಿ.ಎಂ. ಕಾಲೇಜಿನ ಕೋವಿಡ್ ಕೇಂದ್ರದಲ್ಲಿ 300 ಬೆಡ್ ಹಾಗೂ 7 ಖಾಸಗಿ ಆಸ್ಪತ್ರೆಗಳಿಂದ 290 ಬೆಡ್‌ಗಳನ್ನು ನೀಡಲು ಒಪ್ಪಿಗೆ ದೊರೆತಿದೆ. ಸೋಂಕಿತರ ಸಂಖ್ಯೆ ಹೆಚ್ಚಾದರೆ ಕೃಷಿ ಕಾಲೇಜಿನಲ್ಲಿ 400 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಅವಶ್ಯಕತೆ ಹೆಚ್ಚಾದರೆ 48 ಗಂಟೆಗಳಲ್ಲಿ ಬೆಡ್‌ಗಳನ್ನು ಸಿದ್ಧ ಮಾಡಲಾಗುತ್ತದೆ ಎಂದರು. ಹೋಂ ಐಸೋಲೇಷನ್‌ನಲ್ಲಿರುವ ಕೊರೊನಾ ಗುಣಲಕ್ಷಣಗಳಿಲ್ಲದ ಸೋಂಕಿತರಿಗೆ ಮನೆಯಲ್ಲಿಯೇ ಗುಣಮುಖರಾಗುವಂತೆ 15 ದಿನಗಳಿಗೆ ಅವಶ್ಯಕವಿರುವ ಔಷಧೋಪಚಾರವನ್ನು ಜಿಲ್ಲಾಡಳಿತ ಬುಧವಾರದಿಂದ ಮನೆಗೆ ತಲುಪಿಸಬೇಕು ಎಂದು ಸೂಚಿಸಲಾಗಿದೆ ಎಂದು ಹೇಳಿದರು.
'ವೈದ್ಯಕೀಯ ಸಾಮಗ್ರಿ ಖರೀದಿಯಲ್ಲಿ ಅವ್ಯವಹಾರ ಆಗಿಲ್ಲ'
ಸ್ಯಾನಿಟೈಸರ್, ಮಾಸ್ಕ್ ಖರೀದಿಯಲ್ಲಿ ಯಾವುದೇ ಅವ್ಯವಹಾರಗಳು ನಡೆಯದಿದ್ದರೂ ವಿರೋಧ ಪಕ್ಷದವರು ಇಲ್ಲಸಲ್ಲದ ಟೀಕೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರದಲ್ಲಿ ಯಾವ ಅವ್ಯವಹಾರವೂ ನಡೆದಿಲ್ಲ. 2-3 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿ ಯಾವುದನ್ನು ಸರ್ಕಾರ ಖರೀದಿಸಿಲ್ಲ. ಕೊರೊನಾಕ್ಕೆ ಸಂಬಂಧಿಸಿದಂತೆ ಸಾಮಗ್ರಿ ಖರೀದಿ ಮಾಡಿದ ಆ ಸಂದರ್ಭದಲ್ಲಿ ಬೆಲೆ ಇರುವಷ್ಟು ಮಾತ್ರ ನೀಡಿದೆ ಎಂದರು.
'ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸಿದರೆ ಕ್ರಮ'
ಕೊರೊನಾ ಚಿಕಿತ್ಸೆಗಾಗಿ ಇತರೆ ಆಸ್ಪತ್ರೆಗಳ ಆಶ್ರಯ ಪಡೆಯಲಾಗಿದ್ದು, ಸರ್ಕಾರ ನಿಗದಿ ಮಾಡಿದ ದರವನ್ನೇ ಪಡೆಯಬೇಕು. ಚಿಕಿತ್ಸೆಗೆ ನಿರಾಕರಿಸಿದರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮತ್ತು ಜಿಲ್ಲಾ ನೋಡಲ್ ಅಧಿಕಾರಿ ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆ: ೯೪೪೯೮೪೩೨೦೦, ಹಾಗೂ ಸಹಾಯವಾಣಿ ಸಂಖ್ಯೆ: ೦೮೧೭೨-೨೪೬೫೭೫ಗೆ ತಿಳಿಸಿದರೆ ಅಂತಹ ಆಸ್ಪತ್ರೆಗಳ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳುವುದು ಎಂದು ತಿಳಿಸಿದರು.
'ಸರ್ಕಾರದ ಮಾನದಂಡದ ಪ್ರಕಾರ ಕಾಲುವೆಗಳಿಗೆ ನೀರು'
ರೈತರಿಗೆ ನೆರವಾಗುವಂತೆ ಅಣೆಕಟ್ಟಿನಿಂದ ಕಳೆದ ಹತ್ತು ವರ್ಷಗಳಿಂದ ಎಷ್ಟು ನೀರು ಬರುತ್ತದೆ ನೋಡಿ ನಂತರ ಕಾಲುವೆಗಳಿಗೆ ಹರಿಸಲಾಗುತ್ತಿತ್ತು. ಈ ಬಾರಿಯೂ ಸರ್ಕಾರದ ಮಾನದಂಡದ ಮೂಲಕ ನೀರು ಹಾಯಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಶಾಸಕ ಪ್ರೀತಂ ಗೌಡ ಹೇಳಿದ್ದೇನು?
ಶಾಸಕ ಪ್ರೀತಂ ಜೆ. ಗೌಡ ಮಾತನಾಡಿ, ಕೋವಿಡ್ ವ್ಯಾಪಕವಾಗಿ ಹೇಳುತ್ತಿರುವ ಹಿನ್ನೆಲೆಯಲ್ಲಿ ಉಸಿರಾಟದ ತೊಂದರೆ ಇರುವ ಹಾಗೂ ರೋಗದ ಗುಣಲಕ್ಷಣಗಳಿರುವ ಸೋಂಕಿತರನ್ನು ಕೋವಿಡ್ ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತದೆ. ಯಾವುದೇ ರೋಗ ಲಕ್ಷಣಗಳಿಲ್ಲದ ಸೋಂಕಿತರ ಕೋವಿಡ್ ಕೇಂದ್ರಕ್ಕೆ ವರ್ಗಾಯಿಸಿ ಚಿಕಿತ್ಸೆ ನೀಡಲಾಗುತ್ತದೆ.
ಹೋಂ ಐಸೋಲೇಷನ್‌ನಲ್ಲಿರಲು ಇಚ್ಛಿಸಿದ ಸೋಂಕಿತರ ಮನೆಯಲ್ಲಿ ಪ್ರತ್ಯೇಕ ಶೌಚಾಲಯ ಹಾಗೂ ವ್ಯವಸ್ಥಿತ ಕೊಠಡಿ ಇದ್ದರೆ ಅಂಥವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ ಎಂದರು. ಸಾರ್ವಜನಿಕರು ಭಯಪಡದೆ ಜಿಲ್ಲಾಡಳಿತಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.