ಹಾಸನ/ಅರಕಲಗೂಡು: ಪಟ್ಟಣದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ನಿರೀಕ್ಷೆಗೂ ಮೀರಿ ಶ್ರಮಿಸಲಾಗುತ್ತಿದ್ದು, ಇದೀಗ ನಗರೋತ್ಥಾನ ಯೋಜನೆಯಡಿ 1.70 ಕೋಟಿ ರೂ. ವೆಚ್ಚದಲ್ಲಿ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.
ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಶನಿವಾರ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಪಟ್ಟಣದ 11 ಸ್ಥಳಗಳಲ್ಲಿ ರಸ್ತೆ, ಚರಂಡಿಗಳ ನಿರ್ಮಾಣ ಕಾಮಗಾರಿ ನಡೆಸಲಾಗುವುದು. ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಶಾಸಕರು, ಸಾಲಗೇರಿ ರಸ್ತೆ ವಿಸ್ತರಣೆ ಮಾಡಲು ಶಾಲೆಯ ಕಾಂಪೌಂಡ್ ತೆರವುಗೊಳಿಸಲಾಗಿತ್ತು. ನಿಗದಿತ ಜಾಗದಲ್ಲಿ ಕಾಮಗಾರಿ ಕೈಗೊಳ್ಳುವಂತೆ ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ಸೂಚಿಸಿದರು.
ಅಲ್ಲದೇ ಶಾಲೆಯನ್ನು ಅಭಿವೃದ್ಧಿಪಡಿಸಲು ದತ್ತು ನೀಡುವಂತೆ ದೊಡ್ಡಮ್ಮ ಸೇನಾ ಸಮಿತಿಯವರು ಕೇಳಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳಲು ಬಿಇಒ ಶಿವನಂಜೇಗೌಡ ಅವರಿಗೆ ಸೂಚನೆ ನೀಡಿದರು.
ತಹಶೀಲ್ದಾರ್ ವೈ.ಎಂ.ರೇಣುಕುಮಾರ್, ಪ.ಪಂ. ಮುಖ್ಯಾಧಿಕಾರಿ ಸುರೇಶ್ ಬಾಬು ಇತರರು ಈ ಸಂದರ್ಭದಲ್ಲಿದ್ದರು.