ಹಾಸನ: ಬಿತ್ತನೆ ಆಲೂಗಡ್ಡೆಗೆ ಹಿಂದಿನ ಸರ್ಕಾರ ಸಬ್ಸಿಡಿ ನೀಡಿದಂತೆ ಈ ಸರ್ಕಾರವೂ ಘೋಷಣೆ ಮಾಡಬೇಕು ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಒತ್ತಾಯಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1 ಲಕ್ಷ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆಯನ್ನು ಬೆಳೆಯಲಾಗುತಿತ್ತು. ಕಳೆದ ಹ್ತತಾರು ವರ್ಷಗಳಿಂದ ಆಲೂಗಡ್ಡೆಗೆ ಅಂಗಮಾರಿ ರೋಗ ತಗುಲಿ ಈಗ 15ರಿಂದ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಲೂಗೆಡ್ಡೆಯನ್ನು ರೈತರು ಬೆಳೆಯುತ್ತಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕ್ವಿಂಟಾಲ್ ಬಿತ್ತನೆ ಆಲೂಗಡ್ಡೆಗೆ 1200 ರೂ. ಇತ್ತು. ಜೊತೆಗೆ ಔಷಧಿಗೆ ಸಬ್ಸಿಡಿ ಕೊಡಲಾಗಿತ್ತು. ಆದರೆ ಇಂದು ಜಿಲ್ಲಾಧಿಕಾರಿಗಳಿಗೂ ಬಿತ್ತನೆ ಆಲೂ ಬಗ್ಗೆ ಮಾಹಿತಿ ಇಲ್ಲ. ನಾನು ಹೇಳಿದ ಮೇಲೆ ಜನಪ್ರತಿನಿಧಿಗಳು, ವರ್ತಕರು ಹಾಗೂ ಅಧಿಕಾರಿಗಳ ಸಭೆ ಕರೆದಿದ್ದಾರೆ ಎಂದರು.
ಸೋಮವಾರದಿಂದ ಬಿತ್ತನೆ ಆಲೂಗಡ್ಡೆ ಬೀಜದ ಮಾರಾಟ ಎಪಿಎಂಸಿ ಮಾರುಕಟ್ಟೆಯಲ್ಲಿ ಆರಂಭಗೊಳ್ಳಲಿದೆ. ಸಣ್ಣ ಬಿತ್ತನೆ ಆಲೂಗಡ್ಡೆ ಕ್ವಿಂಟಾಲ್ಗೆ 2,250 ರೂ., ದಪ್ಪ ಆಲೂಗಡ್ಡೆ ಕ್ವಿಂಟಾಲ್ಗೆ 1,150 ರೂ. ಎಂದು ನಿಗದಿ ಮಾಡಲಾಗಿದೆ. 8 ಕೋಲ್ಡ್ ಸ್ಟೋರೆಜ್ನಲ್ಲಿ 1,30,888.9 ಕ್ವಿಂಟಾಲ್ ಬಿತ್ತನೆ ಆಲುಗಡ್ಡೆಯಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳು ನಿಗದಿ ಮಾಡಿರುವ ದರಕ್ಕಿಂತ ಹೆಚ್ಚಿನ ಬೆಲೆಗೆ ಬಿತ್ತನೆ ಆಲೂಗಡ್ಡೆ ಮಾರಾಟ ಮಾಡುವಂತಿಲ್ಲ. ಬೇಕಾದರೆ ಕಡಿಮೆ ಬೆಲೆಗೆ ವ್ಯಾಪಾರ ಮಾಡಬಹುದಾಗಿದೆ. ಖರೀದಿ ಮಾಡಿದ ದಿನವೇ ರೈತರಿಗೆ ಗೊಬ್ಬರ ಮತ್ತು ಔಷಧಿ ಕೊಡಬೇಕು. ಇದರಿಂದ ರೈತರು ಮತ್ತೆ ಮತ್ತೆ ತಿರುಗಬಾರದು. ಇದಕ್ಕೆ ಶೇ. 50ರಷ್ಟು ಸಬ್ಸಿಡಿ ಕೊಡಬೇಕು ಎಂದಿದ್ದಾರೆ.