ಹಾಸನ : ಸರ್ಕಾರ ಮುಸುಕಿನ ಜೋಳಕ್ಕೆ ಕೇವಲ 100 ರೂಪಾಯಿ ಸಬ್ಸಿಡಿ ಘೋಷಣೆ ಮಾಡಿದೆ. ರೈತರು ಬೆಳೆದ ಬೆಳೆಗೆ ಶೇ. 50ರಷ್ಟು ಪರಿಹಾರ ಘೋಷಣೆ ಮಾಡಬೇಕು ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಆಗ್ರಹಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗೆ ಸಬ್ಸಿಡಿ ಕಡಿಮೆ ಮಾಡುವ ಮೂಲಕ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. 10-100 ಎಕರೆ ಪ್ರದೇಶದಲ್ಲಿ ಬೆಳೆದ ಜೋಳಕ್ಕೂ ಕೇವಲ 100 ರೂ. ಸಬ್ಸಿಡಿ ನೀಡುವುದು ರೈತರಿಗೆ ಅವಮಾನ ಮಾಡಿದಂತೆ. ಹೀಗಾಗಿ ಕೂಡಲೇ ಈ ಆದೇಶ ಕೈಬಿಟ್ಟು ರೈತರು ಬೆಳೆದ ಬೆಳೆಗೆ ಶೇ. 50ರಷ್ಟು ಪರಿಹಾರವಾಗಿ ಹಣ ಘೋಷಿಸಬೇಕು ಎಂದರು.
ಇದುವರೆಗೂ ಸೆಣಬು, ಅಲೂಗಡ್ಡೆಗೂ ಸಬ್ಸಿಡಿ ಕೊಟ್ಟಿಲ್ಲ. ಅಲ್ಲದೇ ಅಡಿಕೆ ಬೆಲೆ ಕುಸಿದು ಬೆಳೆಗಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ. ಅಷ್ಟೇ ಅಲ್ಲ, ಹಿಂದೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಅಧಿಕಾರಾವಧಿಯಲ್ಲಿ ನೀಡಿದ ಸಬ್ಸಿಡಿಯನ್ನೂ ಬಿಜೆಪಿ ಕಡಿತಗೊಳಿಸುತ್ತಿದೆ ಎಂದು ಸಿಡಿಮಿಡಿಗೊಂಡರು. ಇಲಾಖೆಯ ಸರ್ವೆ ಪ್ರಕಾರ ಜಿಲ್ಲೆಯಲ್ಲಿ 1 ಲಕ್ಷ ರೈತರು 3,15,693 ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದಿದ್ದಾರೆ. ಒಟ್ಟು 97 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆದಿದ್ದು, 50 ಕೋಟಿ ರೂಪಾಯಿ ಸಬ್ಸಿಡಿ ಬರಬೇಕಾಗಿದೆ.
ಕೂಡಲೇ ಹಣ ಬಿಡುಗಡೆ ಮಾಡಬೇಕು. ಅದು ಬಿಟ್ಟು ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಮುಗಿದ ಮೇಲೆ ಸರ್ಕಾರ ಸಬ್ಸಿಡಿ ನೀಡಿದರೆ ಉಪಯೋಗವಾಗದು ಎಂದು ವ್ಯಂಗ್ಯವಾಡಿದರು. ಹಾಸನ ಜಿಲ್ಲೆಯ ಪ್ರದೇಶಗಳಿಗೆ ಕೆಲ ಇಲಾಖೆಯ ಅಧಿಕಾರಿಗಳ ವರ್ಗಾವಣೆ ಹಾಗೂ ಬಡ್ತಿಗೆ ಲಕ್ಷಾಂತರ ರೂ. ಹಣವನ್ನು ಪಡೆಯಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ. ಅಧಿಕಾರಿಗಳ ವರ್ಗಾವಣೆ ಹಾಗೂ ಹಣ ವಸೂಲಾತಿ ಬಿಜೆಪಿ ಸರ್ಕಾರ ಬಂದ ಮೇಲೆ ಹೆಚ್ಚಾಗಿದೆ. ಇದರಿಂದ ಆಡಳಿತದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಹೆಚ್ ಡಿ ರೇವಣ್ಣನವರು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ನಿರ್ಮಾಣವಾಗಿರುವಂತಹ ಸಮುದಾಯ ಭವನಗಳಿಗೆ ಯಾವುದೇ ರಾಜಕೀಯ ಪಕ್ಷದ ನಾಯಕರ ಫೋಟೋಗಳನ್ನಾಗಲಿ ಅಥವಾ ಹೆಸರುಗಳನ್ನಾಗಲಿ ಹಾಕಬಾರದು. ಇತ್ತೀಚೆಗೆ ಸಮುದಾಯ ಭವನವೊಂದರಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಹೆಸರು ಇರುವುದನ್ನು ತೆಗೆದಿರುವಾಗ ಬೇರೆ ಯಾವುದೇ ನಾಯಕರ ಹೆಸರನ್ನೂ ಅದರಲ್ಲಿ ಹಾಕಬಾರದು. ಎಲ್ಲರಿಗೂ ಒಂದೇ ನ್ಯಾಯ ಇರಬೇಕು ಎಂದು ಎಚ್ಚರಿಸಿದರು.