ಹಾಸನ: ಹೇಮಾವತಿ ಜಲಾಶಯದ ಪ್ರವಾಹ ಸಂತ್ರಸ್ಥರಿಗೆ ಭೂಮಿ ಹಂಚಿಕೆ ಮಾಡುವಲ್ಲಿ ಅಕ್ರಮ ಮಾಡಿರುವ ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳುವಂತೆ ಹಾಸನ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ 2019-20ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ 2ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಜಾರಿಗೆ ತಂದಿರುವ ಗಂಗಾ ಕಲ್ಯಾಣ ಯೋಜನೆಗಳಲ್ಲಿ ಫಲಾನುಭವಿಗಳಿಗೆ ಅನೇಕ ವರ್ಷಗಳಿಂದ ಕೊಳವೆ ಬಾವಿ ನೀಡಿಲ್ಲ. ಗಂಗಾ ಕಲ್ಯಾಣ ಯೋಜನೆ ಜಾರಿಗೆ ವಿಶೇಷ ಆದ್ಯತೆ ನೀಡಬೇಕು. ಈಗಾಗಲೇ ಕೊರೆಯಲಾಗಿರುವ ಕೊಳವೆ ಬಾವಿಗಳಿಗೆ ನವೆಂಬರ್ ಅಂತ್ಯದೊಳಗೆ ವಿದ್ಯುತ್ ಸಂಪರ್ಕ ಒದಗಿಸುವಂತೆ ಸೂಚಿಸಿದರು.
ಯೋಜನೆಗಳ ಅನುಷ್ಠಾನದಲ್ಲಿನ ಕೊರತೆಗಳ ಬಗ್ಗೆ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ ಸಚಿವ ಮಾಧುಸ್ವಾಮಿ, ಸಾಮಾಜಿಕ ಭದ್ರತಾ ಯೋಜನೆಗಳ ಮಂಜೂರಾತಿಯಲ್ಲಿ ವಿಳಂಬ ಮಾಡಿದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಈ ಬಗ್ಗೆ ಜಾಗೃತಿ ವಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಕ್ಕು ಪತ್ರ ವಿತರಣೆಯಲ್ಲಿ ಆಗುತ್ತಿರುವ ವಿಳಂಬವನ್ನು ಸಪಡಿಸುವಂತೆ ಶಾಸಕರಾದ ಹೆಚ್.ಡಿ.ರೇವಣ್ಣ, ಶಿವಲಿಂಗೇಗೌಡ ಹಾಗೂ ಬಾಲಕೃಷ್ಣ ಅವರು ಸಚಿವರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಹೋಬಳಿ ಮಟ್ಟದಲ್ಲಿ ಕಂದಾಯ ಇಲಾಖೆ, ಪಿಂಚಣಿ ಅದಾಲತ್‌ಗಳನ್ನು ಕಡ್ಡಾಯವಾಗಿ ನಡೆಸಬೇಕು. ಜನಸಾಮಾನ್ಯರ ಬಳಿಗೆ ಹೋಗಿ ಸರ್ಕಾರದ ಯೋಜನೆಗಳನ್ನು ತಲುಪಿಸಬೇಕು. ಅಪರ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಮತ್ತು ತಹಸೀಲ್ದಾರ್‌ಗಳು ಈ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಿದರು.
ಇನ್ನು, ಸಂತ್ರಸ್ತರಿಗೆ ಭೂಮಿ ಹಂಚಿಕೆ ಮಾಡದೇ ಇರುವ ಅಧಿಕಾರಿಗಳ ಮೇಲೆ ಹಾಗೂ ಇದರಲ್ಲಿ ಶಾಮೀಲಾಗಿರುವ ತಪ್ಪಿತಸ್ಥರ ವಿರುದ್ಧ ಯಾವ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು. ಬೋಗಸ್ ಪ್ರಮಾಣ ಪತ್ರ ನೀಡಿ ಭೂಮಿ ಲಪಟಾಯಿಸಿರುವ ಬಗ್ಗೆ ಈಗಾಗಲೇ ದೂರುಗಳು ಕೇಳಿ ಬಂದಿದೆ. ಇಂತಹ ವಿಚಾರದಲ್ಲಿ ಯಾರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಅವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಕೇಸ್ ದಾಖಲಿಸಲು ಸೂಚಿಸಿದರು.