ಹಾಸನ : ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಂಧನ ರಾಜಕೀಯ ಸಂಚಾಗಿದ್ದು, ಕಾಂಗ್ರೆಸ್ ಹಮ್ಮಿಕೊಂಡಿರುವ ಪ್ರತಿಭಟನೆಗೆ ಜೆಡಿಎಸ್ ಪಕ್ಷ ಬೆಂಬಲಿಸಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರ್ ಸ್ವಾಮಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿ .ಕೆ .ಶಿವಕುಮಾರ್ ಪ್ರಕರಣ ಎರಡು ವರ್ಷ ಹಳೆಯದಾಗಿದೆ. ಡಿಕೆಶಿ ಅವರು ತನಿಖೆಗೆ ಕಾನೂನು ವ್ಯಾಪ್ತಿಯಲ್ಲಿ ಸಹಕಾರ ನೀಡುತ್ತಿದ್ದಾರೆ. ಇಡಿ ಅಧಿಕಾರಿಗಳು ಸತತ 5 ದಿನಗಳ ಕಾಲ ವಿಚಾರಣೆ ನಡೆಸಿದ್ದು, ಹಬ್ಬದ ದಿನದಲ್ಲೂ ಬಿಡುವು ನೀಡದೆ ವಿಚಾರಣೆ ಮಾಡುವ ಜರೂರು ಇರಲಿಲ್ಲ ಎಂದು ಆರೋಪಿಸಿದರು.
ರಾಜಕೀಯ ದ್ವೇಷದಿಂದಲೇ ಡಿಕೆಶಿ ಅವರನ್ನು ಬಂಧನಕ್ಕೆ ಒಳಪಡಿಸಲಾಗಿದೆ. ಬಿಜೆಪಿ ಕೇಂದ್ರ ಹಾಗೂ ರಾಜ್ಯ ನಾಯಕರು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಇಡಿ ಹಾಗೂ ತನಿಖಾ ಸಂಸ್ಥೆಯನ್ನು ತಮ್ಮ ಸ್ವಹಿತಕ್ಕೆ ಬಳಸಿಕೊಂಡು ಡಿಕೆಶಿ ಅವರನ್ನು ಬಂಧನಕ್ಕೆ ದೂಡಿದ್ದಾರೆ. ಈ ರೀತಿ ಪ್ರತಿಪಕ್ಷ ನಾಯಕರನ್ನು ಹತ್ತಿಕ್ಕಲು ಹೊರಟಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದ್ದು, ಇಂತಹ ಬೆಳವಣಿಗೆ ಮುಂದುವರೆಯುವುದು ಖಂಡನೀಯ ಎಂದರು.
ಸಾವಿರ ಕೋಟಿ ಬಿಡುಗಡೆಗೆ ಒತ್ತಾಯ:
ರಾಜ್ಯದಲ್ಲಿ 15 ರಿಂದ 21 ಜಿಲ್ಲೆಗಳು ನೆರೆ ಹಾವಳಿಗೆ ತತ್ತರಿಸಿದ್ದು, ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ನೆರೆ ಹಾವಳಿಯಿಂದ ಭಾರಿ ಪ್ರಮಾಣದ ಹಾನಿಯಾಗಿದ್ದರು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿಲ್ಲ. ಅಲ್ಲದೆ ಇದುವರೆಗೆ ಪರಿಹಾರದ ಹಣ ಫಲಾನುಭವಿಗಳಿಗೆ ತಲುಪಿಲ್ಲ. ರಾಜ್ಯದ ನೆರೆ ಪರಿಸ್ಥಿತಿ ಅಧ್ಯಯನ ವರದಿಯನ್ನು ಕೇಂದ್ರಕ್ಕೆ ತಲುಪಿಸದೆ ರಾಜ್ಯ ಸರ್ಕಾರದಿಂದ ವಿಳಂಬ ಮಾಡಲಾಗುತ್ತದೆ ಎಂದು ದೂರಿದರು.
ಕೂಡಲೇ ಕೇಂದ್ರ ಸರ್ಕಾರ ರಾಜ್ಯಕ್ಕೆ ಸಾವಿರ ಕೋಟಿ ರೂ ಬಿಡುಗಡೆ ಮಾಡಬೇಕು. ಹಲವು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದರಿ ರಸ್ತೆಗಳು ಹದಗೆಟ್ಟಿದ್ದು, ಜನರಿಗೆ ಸಿಗಬೇಕಾದ ಮೂಲಭೂತ ಸೌಕರ್ಯವು ಸಮರ್ಪಕವಾಗಿ ಇಲ್ಲವಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಪರಿಹಾರ ಕಾರ್ಯ ಸಮರ್ಪಕವಾಗಿ ನಿರ್ವಹಣೆ ಶೀಘ್ರವಾಗಿ ಕೈಗೊಳ್ಳಲು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ವಕ್ತಾರ ಹೊಂಗೆರೆ ರಘು, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ದ್ಯಾವೆಗೌಡ ಇದ್ದರು.