ಹಾಸನ: ವಿಧಾನ ಪರಿಷತ್ ಚುನಾವಣೆಗೆ ಹೆಚ್.ಡಿ.ದೇವೇಗೌಡರ ಕುಟುಂಬದ ಮತ್ತೊಂದು ಕುಡಿ ಎಂಟ್ರಿಯಾಗಿದೆ. ಮಾಜಿ ಸಚಿವ ಹೆಚ್.ಡಿ.ರೇವಣ್ಣನವರ ಪುತ್ರ ಡಾ. ಸೂರಜ್ ರೇವಣ್ಣ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಇಂದು ನಾಮಪತ್ರ ಸಲ್ಲಿಸಿದರು.
ತಂದೆ ಜೊತೆಗೆ ಒಂದು, ತಾಯಿ ಜೊತೆಗೆ ಇನ್ನೊಂದು ಒಟ್ಟು ಎರಡು ಸೆಟ್ ನಾಮಪತ್ರ ಸಲ್ಲಿಕೆ ಮಾಡಿರುವ ಸೂರಜ್ ರೇವಣ್ಣ, ಅವರಿಗೆ ಸೂಚಕರಾಗಿ ಶಾಸಕ ಶಿವಲಿಂಗೇಗೌಡ, ಬಾಲಕೃಷ್ಣ, ಲಿಂಗೇಶ್, ಎ.ಟಿ.ರಾಮಸ್ವಾಮಿ ಎಚ್.ಡಿ.ರೇವಣ್ಣ, ಭವಾನಿ ರೇವಣ್ಣ ಸಹಿ ಹಾಕಿದ್ದಾರೆ.
ನಾಮಪತ್ರ ಸ್ವೀಕರಿಸಿದ ಚುನಾವಣಾ ಅಧಿಕಾರಿ ಹಾಗೂ ಹಾಸನ ಡಿಸಿ ಆರ್. ಗಿರೀಶ್ ಪ್ರತಿಜ್ಞಾ ವಿಧಿ ಬೋಧಿಸಿದ್ದಾರೆ. ಇದೇ ಮೊದಲ ಬಾರಿಗೆ ಸೂರಜ್ ರೇವಣ್ಣ ಚುನಾವಣಾ ಕಣಕ್ಕಿಳಿದಿದ್ದಾರೆ. ಈ ಮೊದಲು ವಿಧಾನ ಪರಿಷತ್ ಚುನಾವಣೆಗೆ ಭವಾನಿ ರೇವಣ್ಣ ಸ್ಪರ್ಧಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಭವಾನಿ ಬದಲು ಅವರ ಮಗ ಸೂರಜ್ ರೇವಣ್ಣನವರಿಗೆ ಟಿಕೆಟ್ ನೀಡುವ ಮೂಲಕ ತಮ್ಮ ಹುಟ್ಟುಹಬ್ಬದಂದೆ ಮಗನಿಗೆ MLC ಟಿಕೇಟ್ ನೀಡಿದ್ದು, ಈ ಮೂಲಕ ಹೆಚ್.ಡಿ. ದೇವೇಗೌಡರ ಮನೆಯಲ್ಲಿ 8 ಮಂದಿ ಸಕ್ರಿಯ ರಾಜಕಾರಣದಲ್ಲಿದ್ದಾರೆ.
ಸೂರಜ್ ರೇವಣ್ಣ 2020ರಲ್ಲಿ ಹಾಸನ ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಆದರೆ, ಇದುವರೆಗೂ ವಿಧಾನಸಭೆ, ವಿಧಾನ ಪರಿಷತ್, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಜೆಡಿಎಸ್ ಪರವಾಗಿ ಚುನಾವಣಾ ಪ್ರಚಾರಗಳಲ್ಲಿ ಪಾಲ್ಗೊಳ್ಳುತ್ತಿದ್ದ ಸೂರಜ್ ರೇವಣ್ಣ, ಇದೀಗ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಮುಂದುವರೆದ ಕುಟುಂಬ ರಾಜಕಾರಣ:
ಮಾಜಿ ಪ್ರಧಾನಿ ದೇವೇಗೌಡರು ಇದೀಗ ರಾಜ್ಯಸಭಾ ಸದಸ್ಯರಾದರೆ, ಪುತ್ರರಾದ ರೇವಣ್ಣ ಮತ್ತು ಹೆಚ್.ಡಿ.ಕುಮಾರಸ್ವಾಮಿ ಮತ್ತು ಸೊಸೆ ಅನಿತಾ ಕುಮಾರಸ್ವಾಮಿ ಶಾಸಕರಾಗಿದ್ದಾರೆ. ಅವರ ಸೊಸೆ, ಮೊಮ್ಮಕ್ಕಳು ಕೂಡ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಹೆಚ್‌ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ರಾಜ್ಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲು ಸಾಕಷ್ಟು ಬಾರಿ ಪ್ರಯತ್ನ ಪಟ್ಟರೂ ಇನ್ನೂ ಅದಕ್ಕೆ ಕಾಲ ಕೂಡಿ ಬಂದಿಲ್ಲ.
ಆದರೆ, ಅವರು ಹೊಳೆನರಸೀಪುರದ ಹಳೇಕೋಟೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದರು. ಅವರ ಮಗ ಪ್ರಜ್ವಲ್ ರೇವಣ್ಣ 2019ರಲ್ಲಿ ಹಾಸನ ಲೋಕಸಭಾ ಚುನಾವಣೆಯ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದರು. ಅವರೀಗ ಸಂಸದರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹೆಚ್.ಡಿ.ರೇವಣ್ಣ ಅವರ ಇನ್ನೋರ್ವ ಮಗ ಸೂರಜ್ ರೇವಣ್ಣ ವೃತ್ತಿಯಲ್ಲಿ ವೈದ್ಯರಾಗಿದ್ದು, ಇದೀಗ ವಿಧಾನ ಪರಿಷತ್ ಚುನಾವಣೆ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಮೂಲಕ ಕುಟುಂಬದ ರಾಜಕಾರಣ ಮಂದುವರೆದಿದ್ದು, ಸದ್ಯ 8 ಮಂದಿ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ.