ಹಾಸನ/ಶ್ರವಣಬೆಳಗೊಳ: ಹಾಸನ ಜಿಲ್ಲೆಯ ಶ್ರವಣಬೆಳಗೊಳ ಹೋಬಳಿಯ ಕೊತ್ತನಘಟ್ಟ ಗ್ರಾಮದ ಜೆಡಿಎಸ್ ಕಾರ್ಯಕರ್ತನೊಬ್ಬ ಹಲ್ಲು ಕಟ್ಟಿಸಿಕೊಡಿ ಎಂದು ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿದ್ದಾನೆ.
ಕಾರ್ಯಕ್ರಮವೊಂದರ ಉದ್ಘಾಟನೆಗೆ ತೆರಳಿದ್ದ ಶಾಸಕರಿಗೆ ಕೊತ್ತನಘಟ್ಟ ಗ್ರಾಮದ ಅಣ್ಣಪ್ಪ ಎಂಬಾತ ಮನವಿ ಸಲ್ಲಿಸಿದ್ದಾನೆ. ಮನವಿ ಪತ್ರದಲ್ಲಿ ನಾನು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಪಕ್ಷಕ್ಕಾಗಿ ನನ್ನ ಪ್ರಾಣವನ್ನು ಕೊಡಲು ತಯಾರಿದ್ದೇನೆ. ಕೆಲ ವರ್ಷಗಳ ಹಿಂದೆ ನಾನು ಬಸ್ನಲ್ಲಿ ಹೋಗುತ್ತಿದ್ದಾಗ ರಸ್ತೆಯಲ್ಲಿ ನೀವು ನಿಂತಿದ್ದನ್ನು ನೋಡಿ, ನಿಮ್ಮನ್ನು ಭೇಟಿಯಾಗುವ ಆತುರದಲ್ಲಿ ನಾನು ಚಲಿಸುತ್ತಿದ್ದ ಬಸ್ನಿಂದ ಜಿಗಿದು ರಸ್ತೆಗೆ ಬಿದ್ದಾಗ ನನ್ನ ಹಲ್ಲುಗಳನ್ನು ಕಳೆದುಕೊಂಡೆ. ಆದ್ದರಿಂದ ತಾವು ದಯಮಾಡಿ ನನಗೆ ಹಲ್ಲು ಕಟ್ಟಿಸಿಕೊಡಬೇಕಾಗಿ ಕೇಳಿಕೊಳ್ಳುತ್ತೇನೆ ಎಂದು ಶಾಸಕರಲ್ಲಿ ವಿನಂತಿಸಿಕೊಂಡಿದ್ದಾನೆ.
![ಶಾಸಕರಿಗೆ ಬರೆದ ಪತ್ರ](https://etvbharatimages.akamaized.net/etvbharat/prod-images/kn-hsn-02-jds-member-teath-7203289-hd_31032021103208_3103f_1617166928_261.jpg)
ಇದ್ದಕ್ಕೆ ಸ್ಪಂದಿಸಿದ ಶಾಸಕರು ಆದಷ್ಟು ಬೇಗ ಹಲ್ಲು ಕಟ್ಟಿಸಿಕೊಡುವ ಭರವಸೆ ನೀಡಿದ್ದು, ಅಣ್ಣಪ್ಪ ಸಂತಸ ವ್ಯಕ್ತಪಡಿಸಿದ್ದಾನೆ.
ಇನ್ನು ಈತ ಅಪ್ಪಟ ಜೆಡಿಎಸ್ ಅಭಿಮಾನಿಯಾಗಿದ್ದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಹೆಸರನ್ನು ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ಜೆಡಿಎಸ್ ಪಕ್ಷದ ಯಾವುದೇ ಕಾರ್ಯಕ್ರಮವಿದ್ದರೂ ಪಕ್ಷದ ಚಿಹ್ನೆ ಇರುವ ಟೋಪಿ, ಶಾಲು ಹಾಗೂ ಧ್ವಜ ಹಿಡಿದು ಜೆಡಿಎಸ್ ನಾಯಕರ ಪರವಾಗಿ ಜೈಕಾರ ಕೂಗುತ್ತಾ ಪ್ರಚಾರ ನಡೆಸುತ್ತಾನೆ.