ಹಾಸನ: ಮುಖ್ಯಮಂತ್ರಿಯವರ ಗ್ರಾಮವಾಸ್ತವ್ಯಕ್ಕೂ ಮುನ್ನ, ಹಾಸನ ಜಿಲ್ಲಾಧಿಕಾರಿ ಅಕ್ರಂ ಪಾಷಾ ಮತ್ತು ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಗ್ರಾಮವಾಸ್ತವ್ಯ ಮಾಡಿ ಜಿಲ್ಲೆಯಲ್ಲಿ ಗಮನಸೆಳೆದಿದ್ದರು. ಅದರ ಬೆನ್ನಲೇ ಪೊಲೀಸ್ ಅಧಿಕಾರಿಯೊಬ್ಬರು ಗ್ರಾಮವಾಸ್ತವ್ಯ ಮಾಡೋ ಮೂಲಕ ಮಾದರಿಯಾಗಿದ್ದಾರೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ್ ಗೌಡ ತಾಲೂಕಿನ ಗುಳಸಿಂದ ಗ್ರಾಮದ ಶಾಲೆಯಲ್ಲಿ ತಮ್ಮ ಸಿಬ್ಬಂದಿಯೊಂದಿಗೆ ವಾಸ್ತವ್ಯ ಮಾಡಿ ಸಾರ್ವಜನಿಕರ ಕುಂದು ಕೊರತೆಗಳನ್ನ ವಿಚಾರಿಸಿ ಮುಖ್ಯಮಂತ್ರಿಗಳ ಹಾದಿ ಹಿಡಿದು ಜನರ ಮೆಚ್ಚುಗೆ ಗಳಿಸಿದ್ದಾರೆ. ಗ್ರಾಮ ವಾಸ್ತವ್ಯಕ್ಕೂ ಮುನ್ನ ಗ್ರಾಮದ ದೇವಸ್ಥಾನದ ಬಳಿ ಗ್ರಾಮ ಸಭೆ ನಡೆಸಿದ ಮಂಜುನಾಥ್, ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ರು. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಅಥವಾ ಸಹಾಯಕ್ಕಾಗಿ ಬರಲು ಸಾರ್ವಜನಿಕರು ಹಿಂಜರಿಯಬಾರದು. ಹಿಂದೆ ಕೆಲಸ ನಿರ್ವಹಿಸುತ್ತಿದ್ದ ತುಮಕೂರು ಜಿಲ್ಲೆಯ ಯಡಿಯೂರಿನಲ್ಲಿ ಡಬಲ್ ಮರ್ಡರ್ ಆಗಿತ್ತು. ಈ ಸಂಬಂಧ ಕೆಲವು ಜನರು ಪೊಲೀಸ್ ಠಾಣೆಗೆ ಬರಲು ಸ್ವಲ್ಪ ಮುಜುಗರ,ಭಯಪಡುತಿದ್ರು. ಆದರೆ ಆರೋಪಿಯನ್ನ ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಒಪ್ಪಿಸಿದ್ದೇವೆ.
ನಿಮ್ಮ ಸಹಕಾರವೇ ನಮ್ಮ ಕರ್ತವ್ಯಕ್ಕೆ ಹೆಚ್ಚು ಪುಷ್ಟಿ ನೀಡುತ್ತದೆ. ಹಾಗಾಗಿ ನಾವು ಪ್ರತಿ ಹಳ್ಳಿ, ಹಳ್ಳಿಗೆ ಬೀಟ್ ಸೇವೆ ಮಾಡುತ್ತಿದ್ದೇವೆ. ಒಂದು ಗ್ರಾಮದಲ್ಲಿ ವಾಸ್ತವ್ಯ ಮಾಡುವ ಮೂಲಕ ಜನಸ್ನೇಹಿ ಪೊಲೀಸ್ ಆಗಿ ಮುಂದುವರೆಯುವುದು ನಮ್ಮ ಕರ್ತವ್ಯ ಎಂದರು. ನಮ್ಮ ಪೊಲೀಸ್ ಇಲಾಖೆಯಲ್ಲಿ ಫ್ರೆಂಡ್ಲಿ ಪೊಲೀಸಿಂಗ್ ಇದೆ. ನಾವು ನಿಮಗೆ ಏಕೆ ಮುಕ್ತವಾಗಿ ಫೋನ್ ನಂಬರ್ ಕೊಡುತ್ತೇವೆ ಎಂದರೆ ನಿಮಗೆ ಸಂಕೋಚ ಇದ್ದು, ಠಾಣೆಗೆ ಬರುವುದಕ್ಕೆ ಆಗಲಿಲ್ಲ ಎಂದರೂ ಕರೆ ಮೂಲಕ ನಿಮ್ಮ ಸಮಸ್ಯೆ ಹೇಳಿಕೊಂಡರೆ, ನಾವು ಬೀಟ್ ಸರ್ವಿಸ್ನಲ್ಲಿರುವ ಅಧಿಕಾರಿಯನ್ನು ಕಳುಹಿಸುತ್ತೇವೆ. ಪೊಲೀಸ್ ಠಾಣೆಗೆ ಹೋದರೆ ಕೆಟ್ಟವರಾಗುತ್ತೇವೆ ಎಂದುಕೊಳ್ಳುತ್ತಾರೆ. ಪೊಲೀಸ್ ಠಾಣೆಯಲ್ಲಿ ಇರುವವರೆಲ್ಲ ಕೆಟ್ಟವರಲ್ಲ. ನಾವು ನಿಮ್ಮವರೆ. ನಮಗೂ ಅಕ್ಕ-ತಂಗಿ ಇದ್ದಾರೆ. ಪೊಲೀಸ್ ಠಾಣೆಗೆ ಬರಲು ಸಂಕೋಚ ಪಡಬೇಡಿ ಎಂದು ಮಂಜುನಾಥ್ ಮನವಿ ಮಾಡಿದರು.