ಹಾಸನ: ಅಂಗಡಿಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಕ್ವಿಂಟಾಲ್ಗಟ್ಟಲೆ ಪಡಿತರ ಅಕ್ಕಿ ಮತ್ತು ರಾಗಿಯನ್ನು ಆಹಾರ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ನಗರದ ಎಸ್.ವಿ.ಎಂ. ಶಾಲೆ ಎದುರು ರಸ್ತೆ ಕುಂಬಾರ ಬೀದಿಯ ಸಮೀಪದ ಅಂಗಡಿಯೊಂದರಲ್ಲಿ ಅಕ್ರಮ ದಾಸ್ತಾನು ಮಾಡಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ದಾಳಿ ನಡೆಸಿ ಅಕ್ಕಿ ಹಾಗೂ ರಾಗಿ ವಶಕ್ಕೆ ಪಡೆದಿದ್ದಾರೆ. ಈ ಅಂಗಡಿಯಲ್ಲಿ ಅಕ್ರಮವಾಗಿ ಅಕ್ಕಿ ಮತ್ತು ರಾಗಿ ಸಂಗ್ರಹಿಸಿಟ್ಟುಕೊಂಡು, ಇಲ್ಲಿಂದ ಬೇರೆ ಚೀಲಗಳಲ್ಲಿ, ಬೇರೆ ಬ್ರಾಂಡ್ ನೇಮ್ ಮೂಲಕ ಮಾರಾಟ ಮಾಡಲಾಗುತ್ತಿತ್ತು. ಅಲ್ಲದೆ ಬೇರೆ ಚೀಲಗಳಿಗೆ ಹಾಕಲಾಗಿದ್ದ ಅಕ್ಕಿಯನ್ನು ವಾಹನವೊಂದರ ಮೂಲಕ ಬೇರೆಡೆಗೆ ಸಾಗಿಸುತ್ತಿರುವುದು ಕೂಡ ದಾಳಿ ವೇಳೆ ಕಂಡುಬಂದಿದೆ. 42 ಕ್ವಿಂಟಾಲ್ ರಾಗಿ, 25 ಕ್ವಿಂಟಾಲ್ ಅಕ್ಕಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ನ್ಯಾಯಬೆಲೆ ಅಂಗಡಿಯಲ್ಲಿ ಸರ್ಕಾರದಿಂದ ಬಂದಿರುವ ಅಕ್ಕಿ ಲೋಡ್ ಚೀಲಗಳಲ್ಲಿ ಗ್ರಾಹಕರಿಗೆ ವಿತರಿಸಲು ಅವಕಾಶವಿರುವುದಿಲ್ಲ. ನ್ಯಾಯಬೆಲೆ ಅಂಗಡಿಯಲ್ಲಿ ಗ್ರಾಹಕರು ತರಲಾಗಿರುವ ಚೀಲಗಳಲ್ಲಿ ಕೊಡಬೇಕು ಎಂಬ ನಿಯಮವಿದೆ. ಆದರೆ ಇಲ್ಲಿ ರೀ ಬ್ಯಾಗಿಂಗ್ ಮಾಡಲಾಗಿರುವ ಚೀಲಗಳು, ತೂಕದ ಸ್ಕೇಲ್ ಹಾಗೂ ಹೊಲಿಗೆ ಹಾಕುವ ಮಿಷನ್ ಸ್ಥಳದಲ್ಲಿ ದೊರಕಿದೆ. ಹೀಗೆ ಅಕ್ರಮವಾಗಿ ಪಡಿತರವನ್ನು ದಾಸ್ತಾನು ಮಾಡಿ, ಬೇರೆ ಚೀಲಕ್ಕೆ ತುಂಬಿ ತಮ್ಮದೆಯಾದ ಹೆಸರಿನಲ್ಲಿ ಅಕ್ಕಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದು ಕಂಡು ಬಂದಿದ್ದು, ವಶಪಡಿಸಿಕೊಂಡು ಮುಂದಿನ ಕ್ರಮಕೈಗೊಳ್ಳುವುದು ಎಂದು ಆಹಾರ ಇಲಾಖೆ ಉಪ ನಿರ್ದೇಶಕಿ ಸವಿತಾ ತಿಳಿಸಿದ್ದಾರೆ.