ಹಾಸನ: ಸಿದ್ದರಾಮಯ್ಯನವರ ಬಗ್ಗೆಯೂ ಮಾತನಾಡಲ್ಲ. ಡಿಕೆಶಿ ಬಗ್ಗೆಯೂ ಮಾತನಾಡಲ್ಲ. ಡಿಕೆಶಿಯವರನ್ನ ತನಿಖೆ ಮಾಡುತ್ತಿದ್ದಾರೆ. ಮಾಡಲಿ ನೋಡೋಣ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ, ಇಡಿ ಬಗ್ಗೆ ಮೌನವಾಗಿಯೇ ಆಕ್ರೋಶ ಹೊರಹಾಕಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಓರ್ವ ಅನುಭವಿ ರಾಜಕಾರಣಿ. ಹಿಂದಿನ ಸರ್ಕಾರದ ಕಥೆ ಏನೂ ಇಲ್ಲ. ಅದು ಪೋಸ್ಟ್ ಮಾರ್ಟಮ್ ಆಗಿದೆ. ಅದರ ವಿಚಾರ ಬೇಡ. ಮಾಜಿ ಸಚಿವ ಡಿಕೆಶಿಯನ್ನ ಜಾರಿ ನಿರ್ದೇಶನಾಲಯ ವಿಚಾರಣೆ ಮಾಡುತ್ತಿದೆ. ಮಾಡಲಿ. ಅವರೊಬ್ಬರೇನಾ ದೇಶದಲ್ಲಿ 8 ಕೋಟಿ ರೂ. ಹಣ ಇಟ್ಟಿರೋದು. ತನಿಖೆ ಮಾಡ್ತಿದ್ದಾರೆ ಮಾಡಲಿ ನೋಡೋಣ. ನನಗೆ ಐಟಿ ಮತ್ತು ಇಡಿ ಅಂದರೇನು ಎಂದು ಗೊತ್ತಿಲ್ಲ. ನಾನ್ಯಾಕೆ ದೇಶದ ಬಗ್ಗೆ ಮಾತನಾಡಲಿ. ನಾನು ಹೊಳೆನರಸೀಪುರ ಶಾಸಕ ಅಷ್ಟೇ ಎಂದು ಸುಮ್ಮನಾದರು.
ಇನ್ನು ಸಿಎಂಗೆ ನಿದ್ರೆ ಮಾಡೋಕೆ ಆಗುತ್ತಿಲ್ಲ. ಒಂದು ಕಡೆ ಸಚಿವ ಸಂಪುಟ, ಮತ್ತೊಂದು ಕಡೆ ಅನರ್ಹ ಶಾಸಕರ ಕಥೆ. ನಾನು ಅಮಿತ್ ಶಾ ಬಗ್ಗೆಯಾಗಲಿ, ಪ್ರಧಾನಿ ಬಗ್ಗೆಯಾಗಲಿ ಮಾತನಾಡೋಲ್ಲ. ನಾನು ಸಣ್ಣವನು. ರಾಜ್ಯದ 12 ಜಿಲ್ಲೆಯ ಜನರು ಭಾರಿ ಸಮಸ್ಯೆಯಲ್ಲಿದ್ದಾರೆ. ಉತ್ತರ ಕರ್ನಾಟಕದ ಜನರು ಸಂಕಷ್ಟದಲ್ಲಿದ್ದಾರೆ ಎಂದರು.
ಒಂದು ಹಾಲಿನ ಡೈರಿ ಮಾಡುವುದಕ್ಕೂ 300 ಕೋಟಿ ರೂ. ಬೇಕು. ಸಿಬ್ಬಂದಿಗೆ ಸಂಬಳ ಹೇಗೆ ಕೊಡ್ತಾರೋ ನೋಡೋಣ. ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಹಾಕಿದ್ದ ಅರ್ಜಿಯನ್ನು ನಾನೇ ವಾಪಸ್ ತೆಗೆದುಕೊಂಡಿದ್ದೇನೆ ಎಂದು ರೇವಣ್ಣ ಸ್ಪಷ್ಟಪಡಿಸಿದರು. ಇನ್ನು ಸಿಎಂಗೆ ಮೊದಲ ಟಾರ್ಗೆಟ್ ದೇವೇಗೌಡರು. ದೇವೇಗೌಡರನ್ನ ಮುಗಿಸಬೇಕು ಎಂದು ಸಿಎಂ ಹೊರಟಿದ್ದಾರೆ. ದೇವೇಗೌಡರನ್ನ ಮುಗಿಸಿದ್ರೆ ರಾಜಕೀಯ ಮಾಡೋಕೆ ಸರಿಯಾಗುತ್ತೆ ಅಂತಾ ಸಿಎಂ ಹೊರಟಿದ್ದಾರೆ. ಏನು ಮಾಡ್ತಾರೆ ನೋಡೋಣ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿ ಸುದ್ದಿಗೋಷ್ಠಿ ಮುಗಿಸಿದರು.