ಸಕಲೇಶಪುರ: ತಾಲೂಕಿಗೆ ನೆರೆಯ ಜಿಲ್ಲೆಗಳಿಂದ ಅಕ್ರಮವಾಗಿ ಪ್ರವೇಶಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಎಚ್ಚರಿಕೆ ನೀಡಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಕೋವಿಡ್-19 ಹರಡದಂತೆ ತೆಗೆದುಕೊಳ್ಳಲಾಗುತ್ತಿರುವ ಮುಂಜಾಗ್ರತ ಕ್ರಮ ಕುರಿತು ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ ಅವರು, ಸಕಲೇಶಪುರ ತಾಲೂಕು 3 ಜಿಲ್ಲೆಗಳಿಗೆ ಗಡಿಭಾಗವಾಗಿದೆ. ಅಷ್ಟು ಗಡಿ ಭಾಗದಲ್ಲಿ ಇನ್ನೂ ಮುಂದೆ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ದಕ್ಷಿಣ ಕನ್ನಡ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಂದ ಅನುಮತಿಯಿಲ್ಲದೇ ಪ್ರವೇಶಿಸದಂತೆ ನಿರ್ಬಂದ ಹೇರಲಾಗಿದೆ ಎಂದರು.
ಈಗಾಗಲೇ ಜಿಲ್ಲೆಯ ಹೊರ ಭಾಗಗಳಿಂದ ತಾಲೂಕಿಗೆ ಪ್ರವೇಶಿಸುವ 5 ಮಾರ್ಗಗಳನ್ನು ಮುಚ್ಚಲಾಗಿದೆ. ವಾಹನಗಳ ಪ್ರವೇಶಕ್ಕೆ ನಿಷೇಧ ಹೇರಿದೆ. ಇನ್ನುಳಿದ 4 ದ್ವಾರಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದ್ದು, ಆಹಾರ ಸಾಗಾಣಿಕೆ, ಔಷಧ ಸಾಗಣೆ, ತುರ್ತು ವಾಹನಗಳಿಗೆ ಮಾತ್ರ ಸಂಚಾರ ವ್ಯವಸ್ಥೆಗೆ ಅವಕಾಶ ನೀಡಲಾಗಿದೆ ಎಂದರು.
ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೂ ವಾಹನಗಳಲ್ಲಿ ತರಕಾರಿಗಳ ಸಾಗಣೆಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಜನ ಪಟ್ಟಣದತ್ತ ಅನಗತ್ಯವಾಗಿ ಸಂಚರಿಸಬಾರದು ಹಾಗೂ ಇಂದು ಸಂಜೆ 6 ಗಂಟೆಯಿಂದ ಪೆಟ್ರೋಲ್ ಬಂಕ್ಗಳಲ್ಲಿ ಖಾಸಗಿ ವಾಹನಗಳಿಗೆ ಪೆಟ್ರೋಲ್ ಹಾಕಲು ಅವಕಾಶವಿರುವುದಿಲ್ಲ ಎಂದರು.
ತಹಶೀಲ್ದಾರ್ ಮಂಜುನಾಥ್, ಇಒ ಹರೀಶ್ , ಡಿವೈಎಸ್ಪಿ ಗೋಪಿ, ಸರ್ಕಲ್ ಇನ್ಸ್ಪೆಕ್ಟರ್ ಗಿರೀಶ್, ತಾಲೂಕು ಆರೋಗ್ಯಾಧಿಕಾರಿ ಮಹೇಶ್ ಸೇರಿದಂತೆ ಇದ್ದರು.