ಹಾಸನ : ಬೆಡ್ ಬ್ಲಾಕಿಂಗ್ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹಿಮ್ಸ್ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆ ಮಾಡುವ ಮೂಲಕ ಸುಳ್ಳು ಆರೋಪ ಮಾಡಿದ್ದ ಕಿಡಿಗೇಡಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ರು.
ಕಳೆದ ಶುಕ್ರವಾರ ಕೋವಿಡ್ ಸೋಂಕಿತೆಯೊಬ್ಬರಿಗೆ ಆಮ್ಲಜನಕವಿರುವ ಹಾಸಿಗೆಗಾಗಿ ಅಲೆದಾಡಿ ಕೊನೆಗೆ ಹಾಸನ ಹಿಮ್ಸ್ ಆಸ್ಪತ್ರೆಯಲ್ಲಿ ಬೆಡ್ ಬೇಕೆಂದು ಅಲೆದಾಡುತ್ತಿದ್ದಾಗ, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ದೂರವಾಣಿಗೆ ಕರೆ ಮಾಡಿ ಆಮ್ಲಜನಕ ಸಮೇತ ಹಾಸಿಗೆ ಬೇಕೆಂದು ಕೇಳಿದಾಗ ಆತ ₹5 ಸಾವಿರಕ್ಕೆ ಬೇಡಿಕೆಯಿಟ್ಟಿದ್ದ.
ಇದು ಹಾಸನದ ಹಿಮ್ಸ್ ಆಸ್ಪತ್ರೆಗೆ ಸಂಬಂಧಪಡದ ವಿಚಾರ. ಆಸ್ಪತ್ರೆಯ ಹೊರಗೆ ಕೃತ್ಯವನ್ನು ಎಸಗಿ ಆಸ್ಪತ್ರೆಗೆ ಕೆಟ್ಟ ಹೆಸರು ಬರುವಂತೆ ಮಾಡಿದ್ದಾನೆ. ಆತನನ್ನು ಬಂಧಿಸಬೇಕೆಂದು ಪ್ರತಿಭಟನೆ ಮಾಡಿ ಹಿಮ್ಸ್ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ರು.
ಈ ಕುರಿತು ಹಿಮ್ಸ್ ನಿರ್ದೇಶಕ ರವಿಕುಮಾರ್ ಮಾತನಾಡಿ, ಕೆಲ ಮಾಧ್ಯಮಗಳಲ್ಲಿ ವರದಿ ನೋಡಿ ಮನಸ್ಸಿಗೆ ಬೇಸರವಾಯ್ತು. ಈ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧಿವಿಲ್ಲ. ಆಸ್ಪತ್ರೆಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ.
ನಾನು ಸಿಬ್ಬಂದಿಗೆ ಆತ್ಮಸ್ಥೈರ್ಯ ತುಂಬಿ ಕೆಲಸಕ್ಕೆ ಹಾಜರಾಗುವಂತೆ ಹೇಳಿದ್ದೇನೆ. ಜೊತೆಗೆ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಲು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದೇವೆ ಎಂದರು.
ಕೋವಿಡ್ ಸಂದರ್ಭದಲ್ಲಿ ನಮ್ಮ ಪ್ರಾಣವನ್ನು ಒತ್ತೆಯಿಟ್ಟು ಕೆಲಸ ಮಾಡ್ತಿದ್ದೇವೆ. ಯಾರೋ ಅನಾಮಿಕನೊಬ್ಬ ನನ್ನ ಹೆಸರನ್ನು ಹೇಳಿ ನನ್ನ ಇಷ್ಟು ವರ್ಷ ಮಾಡಿದ ಕೆಲಸಕ್ಕೆ ಕಪ್ಪು ಚುಕ್ಕಿ ತಂದಿಟ್ಟಿದ್ದಾನೆ. ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧಿವಿಲ್ಲ.
ಇದು ತನಿಖೆಯಾಗಬೇಕು. ಕಾರಣ ಈ ಪ್ರಕರಣದಲ್ಲಿ ನಾನು ತಪ್ಪು ಮಾಡಿಲ್ಲ. ನಾನು ಎಲ್ಲಾ ತನಿಖೆಗೂ ಸಿದ್ದವಿದ್ದೇನೆ ಎನ್ನುತ್ತಾರೆ ಆರೋಪ ಹೊತ್ತಿರುವ ಹಿಮ್ಸ್ನ ಹಿರಿಯ ದಾದಿ.
ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎಂಬಂತೆ, ಆಸ್ಪತ್ರೆಯಿಂದ ಹೊರಗೆ ನಡೆದ ವಿಚಾರ ಈಗ ರಾಜ್ಯದಲ್ಲಿಯೇ ಸದ್ದು ಮಾಡ್ತಿದೆ. ಹೀಗಾಗಿ, ಬೆಡ್ ಬ್ಲಾಕಿಂಗ್ ದಂಧೆಯ ಹಿಂದಿರುವ ಆ ರೂವಾರಿ ಯಾರು..? ನಿಜಕ್ಕೂ ಆತ ಹಿಮ್ಸ್ ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಶಾಮೀಲಾಗಿ ಈ ದಂಧೆಯನ್ನು ಮಾಡ್ತಿದ್ದಾನಾ..? ಅಥವಾ ಹಣದ ಆಸೆಗಾಗಿ ಯಾರೋ ಪರಿಚತರ ಹೆಸರನ್ನು ಬಳಸಿಕೊಂಡು ಕೃತ್ಯ ಎಸಗಿದ್ನಾ...? ಪೊಲೀಸರ ತನಿಖೆಯಿಂದಷ್ಟೆ ಬಯಲಾಗಬೇಕಿದೆ.