ಹಾಸನ: ಮಲೆನಾಡು ಮತ್ತು ಅರೆ ಮಲೆನಾಡು ಹೊಂದಿರುವ ಹಾಸನದಲ್ಲಿ ನಿತ್ಯ ಮಳೆಯಾಗುವ ಮೂಲಕ ಕೆಲವರಿಗೆ ಸಂತಸವಾದ್ರೆ, ಮತ್ ಕೆಲವರಿಗೆ ಯಾಕಪ್ಪಾ ಬಂತು ಮಳೆ ಎಂಬಂತಾಗಿದೆ.
ಕಳೆದ ಮೂರು ದಿನಗಳಿಂದಲೂ ಜಿಲ್ಲೆಯಲ್ಲಿ ಜಿಟಿಜಿಟಿ ಸೋನೆ ಮಳೆ ಸುರಿಯುತ್ತಿರುವುದರಿಂದ ಹಾಸನದ ಮಂದಿಗೆ ಸಾಕಷ್ಟು ಕಿರಿಕಿರಿಯಾಗುತ್ತಿದೆ. ಮುಂಗಾರು ಮಳೆ ಸಮಯಕ್ಕೆ ಸರಿಯಾಗಿ ಬಾರದಿದ್ದರೂ ಹಿಂಗಾರು ಮಳೆ ಮಾತ್ರ ಜಿಲ್ಲೆಯಲ್ಲಿ ಆರ್ಭಟಿಸಿ, ದಶಕಗಳಿಂದ ನೀರನ್ನೇ ಕಾಣದ ಜಿಲ್ಲೆಯ ಬಯಲು ಸೀಮೆ ಪ್ರದೇಶಗಳಲ್ಲಿನ ಕೆರೆಕಟ್ಟೆಗಳು ಭರ್ತಿಯಾಗುವಂತೆ ಮಾಡಿದ್ದು ಬಹಳ ವಿಶೇಷ.
ಅಗಸ್ಟ್ನಲ್ಲಿ ಸುರಿದ ಆಶ್ಲೇಷ, ಮೇಘ ಮತ್ತು ಪುನರ್ವಸು ಮಳೆಗೆ ಜಿಲ್ಲೆ ತಲ್ಲಣಗೊಂಡಿತ್ತು. ಮಲೆನಾಡು ಭಾಗದಲ್ಲಿ ಅಪಾರ ಹಾನಿ ಸಂಭವಿಸಿ ಜನರ ಬದುಕು ಅಸ್ತವ್ಯಸ್ತವಾಗಿತ್ತು. ಇದಾದ ಬಳಿಕ ಉತ್ತರೆ, ಹಸ್ತ ಮಳೆ ಜಿಲ್ಲೆಯ ರೈತಾಪಿ ವರ್ಗದವರನ್ನು ಹರ್ಷಚಿತ್ತರಾಗಿ ಮಾಡಿದ್ವು. ಅಕ್ಟೋಬರ್ನಲ್ಲಿ ಸುರಿದ ಚಿತ್ತ ಮತ್ತು ಸ್ವಾತಿಮಳೆ ಹಾಸನಾಂಬ ದೇವಾಲಯಕ್ಕೆ ಬರುವ ಭಕ್ತರುಗಳಿಗೆ ಇನ್ನಿಲ್ಲದ ತೊಂದರೆ ನೀಡಿತ್ತು. ಇದರಿಂದ ಭಕ್ತಾದಿಗಳು ಕೂಡ ಬೇಸರ ವ್ಯಕ್ತಪಡಿಸಿದರು.
ನವೆಂಬರ್ ಮೊದಲ ವಾರದಲ್ಲಿ ಮತ್ತು ಕೊನೆಯ ಎರಡು ದಿನಗಳಿಂದ ಸುರಿಯುತ್ತಿರುವ ವಿಶಾಖ ಮತ್ತು ಅನುರಾಧ ಮಳೆಯಿಂದ ಜನರಿಗೆ ಮತ್ತು ರೈತಾಪಿ ವರ್ಗದವರಿಗೆ ಸ್ವಲ್ಪಮಟ್ಟಿನ ಸಂಕಷ್ಟ ತಂದಿಟ್ಟಿದೆ. ಕೈಗೆ ಬರುವಂತಹ ಫಸಲು ಸೋನೆ ಮಳೆಯಿಂದ ಕಟಾವಿಗೆ ಬಂದಿರುವ ಬೆಳೆಗಳು ಮತ್ತು ಒಕ್ಕಣೆಗೆ ಸಿದ್ದ ಮಾಡಿಕೊಳ್ಳುತ್ತಿರುವಾಗ ಬೆಳೆಗಳು ಶೀತಕ್ಕೆ ಸೊರಗುವ ಮೂಲಕ ಬೆಳೆ ರೈತರ ಕೈಗೆ ಬಾರದಂತೆ ಆಗುತ್ತಿದೆ. ಈ ಬಾರಿ ಸುರಿದ ಮಳೆಯಿಂದ ಜಿಲ್ಲೆಯ ಜೀವನಾಡಿ ಎಂದೇ ಹೇಳಲಾಗುವ ಹೇಮಾವತಿ ಜಲಾಶಯ ಮೈದುಂಬಿಕೊಂಡು ಅವಧಿಗೂ ಮುನ್ನವೇ ಹರಿದಳು.
ಎರಡು ದಿನಗಳ ಕಾಲ ನಡೆದ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೂ ಮಳೆ ಅಡ್ಡಿ ಆಗಿದ್ದರಿಂದ ಕಾರ್ಯಕ್ರಮಕ್ಕೆ ಸ್ವಲ್ಪ ತೊಂದರೆ ಉಂಟಾಯಿತು. 2 ದಿನಗಳಿಂದ ಕೆಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದರಿಂದ ಇವತ್ತು ಶಾಲಾ-ಕಾಲೇಜುಗಳಿಗೆ ವಿಶೇಷ ತರಗತಿಗಳನ್ನು ನಡೆಸುತ್ತಿದ್ದರು. ವಿದ್ಯಾರ್ಥಿಗಳು ಮಳೆಯ ನಡುವೆಯೇ ಕೊಡೆ ಹಿಡಿದು ಶಾಲೆಗೆ ತೆರಳುವ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು.
ವಿಶಾಖ ಮತ್ತು ಅನುರಾಧ ಮಳೆಯು ಜಿಲ್ಲೆಯಲ್ಲಿ ಬಿಡದೆ ಸುರಿಯುತ್ತಿರುವುದರಿಂದಾಗಿ ಜನರಿಗೆ ಅನುಕೂಲ ಮತ್ತು ಅನಾನುಕೂಲವನೂನು ಉಂಟು ಮಾಡುತ್ತಿರುವುದು ಅಷ್ಟೇ ಸತ್ಯ..