ಹಾಸನ: ಜಿಲ್ಲೆಯಲ್ಲಿ ಇಂದು ಸರಿ ಸುಮಾರು ಒಂದೂವರೆ ಗಂಟೆಗೂ ಅಧಿಕ ಕಾಲ ವರುಣ ಅಬ್ಬರಿಸಿ ಬೊಬ್ಬಿರಿದು ಇಳೆಯನ್ನ ತಂಪಾಗಿಸಿದ್ದಾನೆ. ಕಳೆದ ಹದಿನೈದು-ಇಪ್ಪತ್ತು ದಿನಗಳಿಂದ ಬಿಸಿಲಿನ ತಾಪಕ್ಕೆ ಬಳಲಿ ಬೆಂಡಾಗಿದ್ದ ಜನ, ವರುಣನ ಆಗಮನದಿಂದ ಕೊಂಚ ಖುಷಿಯಾಗಿದ್ದಾರೆ.
ಹಾಸನದಲ್ಲಿ ವಾಣಿಜ್ಯ ಬೆಳೆ ಆಲೂಗಡ್ಡೆಯನ್ನು ಕೃತಿಕಾ ಮಳೆ ಕೊನೆಯಲ್ಲಿ ಹಾಗೂ ರೋಹಿಣಿ ಮಳೆಯ ಆರಂಭದ ವೇಳೆ ಬಿತ್ತನೆ ಮಾಡಲಾಗುತ್ತದೆ. ಈ ಬಾರಿ ವರುಣ ಬಿತ್ತನೆ ಸಮಯಕ್ಕೆ ಸರಿಯಾಗಿ ಆಗಮಿಸುತ್ತಿರುವುದರಿಂದ ರೈತರು ಕೂಡ ಖುಷಿಯಾಗಿದ್ದಾರೆ.
ಆಲೂಗಡ್ಡೆ ಬಿತ್ತನೆ ಬೀಜ ಮಾರಾಟ ಮಾಡಿರುವ ಎರಡು ವಾರದ ಬಳಿಕ, ಸರಿಯಾದ ಸಮಯಕ್ಕೆ ಮಳೆ ಬಂದಿರುವುದರಿಂದ ರೈತರು ಕೋಲ್ಡ್ ಸ್ಟೋರೇಜ್ನಲ್ಲಿದ್ದ ಆಲೂಗಡ್ಡೆಯನ್ನು ಖರೀದಿಸಿ ಬಿಸಿಲಿನಲ್ಲಿ ಒಣಗಿಸಿ ಇಟ್ಟುಕೊಂಡಿದ್ದರು. ಮಳೆಯಾಗಿರುವುದರಿಂದ ಒಂದೆರಡು ದಿನಗಳಲ್ಲಿ ಜಮೀನನ್ನ ಹದಗೊಳಿಸಿ ಒಂದು ವಾರದಲ್ಲಿ ಆಲೂಗಡ್ಡೆ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.