ಹಾಸನ: 22 ವರ್ಷಗಳ ಹಿಂದೆ ಮೋದಿ ಎಲ್ಲಿದ್ರು..? ನಾವು ವಿಮಾನ ನಿಲ್ದಾಣ ಮಾಡಿದಾಗ ಅಂದಿನ ರಾಜ್ಯಸಭಾ ಸದಸ್ಯರಾಗಿದ್ದ ರಾಜೀವ್ ಚಂದ್ರಶೇಖರ್ ಗುದ್ದಲಿಪೂಜೆ ಮಾಡಿದ್ದರು. ದೇವರ ಮತ್ತು ಜನರ ಆಶೀರ್ವಾದ ಇರುವವರೆಗೂ ದೇವೇಗೌಡರ ಕುಟುಂಬ ಮತ್ತು ನಮ್ಮ ಪಕ್ಷವನ್ನು ಯಾರು ಏನೂ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಬಿಜೆಪಿಯ ಕೇಂದ್ರ ಸಚಿವ ಕೃಷ್ಣಪಾಲ್ ಗುರ್ಜರ್ ವಿರುದ್ಧ ಮಾಜಿ ಸಚಿವ ಹೆಚ್.ಡಿ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ಸಂಸದರ ನಿವಾಸದಲ್ಲಿ ಮಾತನಾಡಿದ ಅವರು ಈ ಜಿಲ್ಲೆಗೆ ಬಿಜೆಪಿ ಪಕ್ಷದ ಕೊಡುಗೆ ಏನು..? ದೇವೇಗೌಡರ ಮತ್ತು ಕುಮಾರಸ್ವಾಮಿಯವರ ಕಾಲದಲ್ಲಿ ಆದ ಅಭಿವೃದ್ಧಿ ಕಾರ‍್ಯವನ್ನು ತಡೆದಿರುವುದೇ ಸಾಧನೆ ಎಂದು ಬೀಗುತ್ತಿದ್ದಾರೆ. ನಮ್ಮ ಪಕ್ಷ ಮುಗಿಸಲು ಹೊರಟಿದ್ದಾರೆ ಎಂದರೇ ನಮ್ಮ ಪಕ್ಷದ ತಾಕತ್ತು ಎಷ್ಟು ಅಂತ ಅವರಿಗೆ ಗೊತ್ತಾಗಿದೆ. ನಾವು ಯಾವುದೇ ಪಕ್ಷದ ಕಾಲು ಹಿಡಿಯಲು ಹೋಗಲಿಲ್ಲ. ಮೋದಿಯವರೇ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಆಗುವಂತೆ ಕೇಳಿದ್ದರು. ಆದ್ರೆ ನಾವು ಕೋಮುವಾದ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ಸರ್ಕಾರ ರಚಿಸಲಿಲ್ಲ ಎಂದು ಹೇಳಿದರು.
ಏರ್‌ಪೋರ್ಟ್ ನಿರ್ಮಾಣ ಮಾಡಲು ದೇವೇಗೌಡರು ಎಷ್ಟು ಬಾರಿ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಇಟ್ಟರೂ ಅದನ್ನು ಮಾಡಲಿಲ್ಲ. ಮಾಜಿ ಪ್ರಧಾನಿ ಎಂಬ ಕನಿಕರವೂ ಇಲ್ಲದೇ ಕಾಮಗಾರಿಗೆ ಮಂಜೂರಾತಿ ಮಾಡಲಿಲ್ಲ. ಭೀಕ್ಷೆ ಬೇಡುವುದು ಒಂದು ಬಾಕಿಯಿತ್ತು ಎಂದು ರೇವಣ್ಣ ಬೇಸರ ವ್ಯಕ್ತಪಡಿಸಿದರು.
ಇನ್ನು ಚುನಾವಣೆ ಸಮೀಪಿಸುತ್ತಿದ್ದಂತೆ ವಿರೋಧ ಪಕ್ಷದ ಚುನಾವಣಾ ಆಕಾಂಕ್ಷಿಗಳ ಮನೆ ಮೇಲೆ ಐಟಿ, ಇಡಿ ಬಿಟ್ಟು ದಾಳಿ ಮಾಡಿಸಿ ಅಧಿಕಾರ ಹಿಡಿಯುವ ಜಾಯಮಾನ ಅವರದು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ..? ಬಿಜೆಪಿ ಏನಾಗುತ್ತೆ ಎಂದು ನಿಮಗೆ ಗೊತ್ತಾಗಲಿದೆ ಎಂದು ಹೇಳಿದರು.
ಓದಿ : ಈದ್ಗಾ ಮೈದಾನಕ್ಕೆ ತೆರಳಿದ ಸಿದ್ದರಾಮಯ್ಯ ಪ್ರಾರ್ಥನೆಯಲ್ಲಿ ಭಾಗಿ.. ದೇವಸ್ಥಾನಕ್ಕೆ ಜಮೀರ್ ಕರೆದೊಯ್ದ ಮಾಜಿ ಸಿಎಂ