ಹಾಸನ: ನಾನು ಅವರ ಹಾಗೇ ಹೆಚ್ಚು ಓದಿಲ್ಲ. ನಾನು ಲೆಕ್ಕದಲ್ಲಿ ತುಂಬಾನೇ ವೀಕ್. ಹಾಗಾಗಿ ಅವರೇ ಹೋಗಿ ಶಿರಾ, ಕೆ.ಆರ್. ಪೇಟೆ ಮತ್ತು ಹಾಸನದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಎಷ್ಟು ಸ್ಥಾನ ಗೆದ್ದಿದ್ದೇವೆ ಎಂದು ಲೆಕ್ಕ ಮಾಡಲಿ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹಾಸನ ಶಾಸಕ ಪ್ರೀತಂಗೌಡಗೆ ಪ್ರತ್ಯುತ್ತರ ನೀಡಿದ್ದಾರೆ.
ಲೆಕ್ಕ ಗೊತ್ತಿದಲ್ಲದೇ ಯಾವ್ಯಾವೋ ಬೇಕಿಲ್ಲದ ಕಾಮಗಾರಿ ತರ್ತಾರೆ. ಹಾಸನಕ್ಕೆ ಬಂದ್ರೆ ಹಾಸನದ ಜನತೆಯೇ ಸರಿಯಾದ ಲೆಕ್ಕ ಕೊಡುತ್ತಾರೆ. ಬಂದು ಪಕ್ಷದ ಸಾಮರ್ಥ್ಯ ತೋರಿಸಲಿ ಎಂದು ಸವಾಲು ಹಾಕುವ ಮೂಲಕ ಪ್ರೀತಂ ಗೌಡ ಹೇಳಿಕೆಗೆ ಮಾಜಿ ಸಚಿವ ರೇವಣ್ಣ ನಿನ್ನೆ ಸುದ್ದಿಗೋಷ್ಠಿ ನಡೆಸಿ ಪ್ರತ್ಯುತ್ತರ ನೀಡಿದ್ರು.
2023ಕ್ಕೆ ಜೆಡಿಎಸ್ ಏನು ಎಂಬುದರ ಲೆಕ್ಕ ಕೊಡುತ್ತೇವೆ. ನಮಗೆ ಲೆಕ್ಕ ಹಾಕಲಿಕ್ಕೆ ಬರೋಲ್ಲ, ಅವರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ಅವರು ದೊಡ್ಡವರು, ನಾನು ದೊಡ್ಡವರ ಬಗ್ಗೆ ಮಾತನಾಡುವುದಿಲ್ಲ. ನಾವು ಹೊಟ್ಟೆಗೆ ಹಿಟ್ಟಿಲ್ಲದವರ ಲೆಕ್ಕ ಹಾಕುತ್ತೇವೆ. ಈಗ ರಾಜ್ಯ ಹಾಗೂ ಕೇಂದ್ರದಲ್ಲಿ ರಾಷ್ಟ್ರೀಯ ಪಕ್ಷ ಇದೆ. ತಾಕತ್ತು ಇದ್ದರೆ ರೈತರ ರಾಷ್ಟ್ರೀಕೃತ ಬ್ಯಾಂಕ್ನಲ್ಲಿರುವ ಸಾಲವನ್ನು ಮನ್ನಾ ಮಾಡಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಈ ಸುದ್ದಿಯನ್ನೂ ಓದಿ: ಅಪ್ಪ-ಮಕ್ಕಳ ಪಕ್ಷ ಏನು ಮಾಡಲಿದೆ ಎಂಬುದನ್ನು 2023ರಲ್ಲಿ ನೋಡಿ: ರೇವಣ್ಣ
ಹಿಂದೆ ರೈತರ ಸಾಲ ತೀರಿಸಿದ್ದು ಅಪ್ಪ-ಮಕ್ಕಳ ಪಕ್ಷವೇ ಅಲ್ವಾ? ಮೋದಿಯವರು ತಾಕತ್ತಿದ್ರೆ ರೈತರ ಸಾಲ ಮನ್ನಾ ಮಾಡಲಿ ಎಂದು ಸವಾಲೆಸೆದರು. ಇನ್ನು ಅಪ್ಪ - ಮಗನೇ ಸಸಿ ನೆಟ್ಟಿದ್ದು, ರಾಜ್ಯದಲ್ಲಿ ಅವರು ಅಧಿಕಾರಕ್ಕೆ ಬರೋದಿಕ್ಕೆ. ಇವತ್ತು ನಮ್ಮ ಪಕ್ಷವನ್ನೇ ಕಿತ್ತು ಹಾಕುತ್ತೇವೆ ಎಂದು ಅರಚುತ್ತಿದ್ದಾರೆ. ಅವರಿಗೆ ದೇವರು ಒಳಿತು ಮಾಡಲಿ ಎಂದರು.
ಮಂತ್ರಿ ಸ್ಥಾನದಿಂದ ವಂಚಿತವಾಗಿರುವ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರಲ್ಲವೇ ಎನ್ನುವ ಪ್ರಶ್ನೆಗೆ, ಅವರ ಪಕ್ಷದ ವಿಚಾರಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ. ನಮ್ಮ ಪಕ್ಷವನ್ನು ಮುಳುಗುವ ದೋಣಿ ಎಂದಿದ್ದಾರೆ. ದೊಡ್ಡವರಿರುವಾಗ ನಾನು ಮಾತನಾಡುವುದು ತಪ್ಪು. ಆದ್ರೆ ಅಪ್ಪ-ಮಗನೇ ಅಲ್ಲವೇ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಸಸಿ ನೆಟ್ಟಿದ್ದು. ಅದನ್ನು ಅರ್ಥ ಮಾಡಿಕೊಂಡರೇ ಸಾಕು ಬಿಜೆಪಿಯವರು ಎಂದರು.