ಹಾಸನ: ನಿಮ್ಮ ರಕ್ಷಣೆಗಾಗಿ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದೇವೆ. ಈ ಕೆಲಸ ಮಾಡಬೇಡಿ ಎಂದರೆ, ನಾಳೆಯಿಂದಲೇ ನಾವು ಮನೆಯಲ್ಲಿ ಕೂರುತ್ತೇವೆ ಎಂದು ಬೆಳಗ್ಗೆ ವಿಹಾರಕ್ಕೆಂದು ಬಂದ ಸಾರ್ವಜನಿಕರಿಗೆ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಮನವಿ ಮಾಡಿದ ಪರಿ ಇದು.
ಇಲ್ಲಿನ ರಿಂಗ್ ರಸ್ತೆ, ಬಿ.ಎಂ.ರಸ್ತೆ, ಹಳೆ ಬಸ್ ನಿಲ್ದಾಣ, ಮಹಾರಾಜ ಪಾರ್ಕ್ ಸೇರಿದಂತೆ ವಿವಿಧೆಡೆ ಪ್ರತಿನಿತ್ಯ ವಿಹಾರಕ್ಕೆ ಹೋಗುವ ನಾಗರಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ, ವಾಯುವಿಹಾರ ಮಾಡುತ್ತಿದ್ದರು. ಇಂದು ಮುಂಜಾನೆ ಅರಿವು ಮೂಡಿಸುವ ಅವರಿಗೆಲ್ಲ ಎಸ್ಪಿ ಎಚ್ಚರಿಕೆ ನೀಡಿದರು.
21 ದಿನಗಳ ಲಾಕ್ಡೌನ್ ಪಾಲಿಸುವುದರಿಂದ ಕೊರೊನಾ ತಡೆಗೆ ಸಾಧ್ಯವಾಗುತ್ತದೆ. ನಾಗರಿಕರ ಆರೋಗ್ಯ ಭದ್ರತೆಯಿಂದ ಈ ನಿಯಮ ಅನುಸರಿಸಬೇಕಿದೆ. ಆದರೆ, ಶಿಕ್ಷಿತರಾದ ನೀವೆಲ್ಲ ಉಲ್ಲಂಘನೆ ಮಾಡುತ್ತಿದ್ದೀರಿ. ನಮ್ಮ ಶ್ರಮ ವ್ಯರ್ಥ ಮಾಡುತ್ತಿದ್ದೀರಿ. ದಯಮಾಡಿ ಅರ್ಥಮಾಡಿಕೊಳ್ಳಿ ಎಂದು ಮನವಿ ಮಾಡಿದರು.