ಹಾಸನ: ರಣಘಟ್ಟ ಯೋಜನೆ ಪೂರ್ಣಗೊಳ್ಳಬೇಕು ಎಂದು ಅಂಕಿತ ಹಾಕಿದವರೇ ಯಡಿಯೂರಪ್ಪನವರು. ಆದರೆ ಸಿಎಂ ಆದ ಬಳಿಕ ಅವರ ಕೈ ಕಾಲು ಹಿಡಿದರೂ, ಕುಮಾರಸ್ವಾಮಿ ನೀಡಿದ ನೂರು ಕೋಟಿ ಅನುದಾನವನ್ನು ಬಿಡುಗಡೆಗೊಳಿಸಲು ಸಹಿ ಹಾಕುತ್ತಿಲ್ಲ ಅಂತ ಬಹಿರಂಗವಾಗಿಯೇ ಶಾಸಕ ಲಿಂಗೇಶ್ ಆರೋಪಿಸಿದ್ದಾರೆ.
ಜಿಲ್ಲೆಯ ಬೇಲೂರು ತಾಲೂಕಿನ ಹಳೇಬೀಡು ಪಟ್ಟಣದ ದ್ವಾರಸಮುದ್ರ ಕೆರೆ 12 ವರ್ಷಗಳ ಬಳಿಕ ತುಂಬಿದ ಹಿನ್ನೆಲೆ ಜಿಲ್ಲಾಡಳಿತದಿಂದ ಬಾಗಿನ ಅರ್ಪಿಸಿ, ನಂತರ ವೇದಿಕೆಯ ಭಾಷಣದಲ್ಲಿ ಮುಖ್ಯಮಂತ್ರಿಯ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವರ ಎದುರೇ ಶಾಸಕ ಲಿಂಗೇಶ್ ಅಸಮಾಧಾನ ಹೊರಹಾಕಿದರು.
ಹಳೇಬೀಡು ಮಾದಿಹಳ್ಳಿ ಏತ ನೀರಾವರಿ ಯೋಜನೆ ಸಂಪೂರ್ಣವಾಗಿ ಕಾರ್ಯಗತವಾಗಬೇಕಾದರೆ ರಣಘಟ್ಟ ಯೋಜನೆ ಪೂರ್ಣಗೊಳಿಸಬೇಕು. 2017ರಲ್ಲಿ ರಣಘಟ್ಟ ಯೋಜನೆ ಪೂರ್ಣಗೊಳಿಸಬೇಕು ಅಂತ ಬೇಲೂರು ಮತ್ತು ಹಳೇಬೀಡು ಭಾಗದ ರೈತರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ರು. ಬಿ.ಎಸ್. ಯಡಿಯೂರಪ್ಪ ಕೂಡ ದನಿಗೂಡಿಸಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ನಂತರ ಕುಮಾರಸ್ವಾಮಿಯ ಸಮ್ಮಿಶ್ರ ಸರ್ಕಾರದಲ್ಲಿ ಇದಕ್ಕೆ 100 ಕೋಟಿಯನ್ನು ಮೀಸಲಿಟ್ಟು ಯೋಜನೆಗೆ ಚಾಲನೆ ನೀಡಿದರು.
ಸರ್ಕಾರ ಬದಲಾವಣೆಯಾದ ಬಳಿಕ ಯಡಿಯೂರಪ್ಪನವರು ಮುಖ್ಯಮಂತ್ರಿ ಆದ್ರು. ರಣಘಟ್ಟ ಯೋಜನೆಯನ್ನು ಪೂರ್ಣಗೊಳಿಸುತ್ತೇನೆ ಅಂತ ಟೆಂಡರ್ ಪ್ರಕ್ರಿಯೆಯನ್ನು ಕೂಡ ಮಾಡಿಸಿದರು. ಆದರೆ ಸಹಿ ಹಾಕುವ ಮೂಲಕ ಅಂಕಿತ ಹಾಡಬೇಕಾದ ಯಡಿಯೂರಪ್ಪನವರೇ ಯೋಜನೆಗೆ ಅಡ್ಡಗಾಲು ಹಾಕುತ್ತಿದ್ದಾರೆ. ದಯಮಾಡಿ ನಮ್ಮ ಭಾಗದ ರೈತರನ್ನು ಸಾವಿನ ದವಡೆಗೆ ತಳ್ಳದೆ ನೀರಾವರಿ ಯೋಜನೆಯನ್ನು ಕಲ್ಪಿಸಿ ಕೊಡುವ ಮೂಲಕ ರೈತರ ಬದುಕನ್ನು ಬಂಗಾರವಾಗಿಸಬೇಕು ಎಂದು ವೇದಿಕೆಯಲ್ಲಿ ಕುಳಿತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ .ಗೋಪಾಲಯ್ಯಗೆ ಮನವಿ ಮಾಡುವ ಮೂಲಕ ಶಾಸಕ ಲಿಂಗೇಶ್ ಸರ್ಕಾರದ ವಿರುದ್ಧ ಗುಡುಗಿದರು.
ಲಿಂಗೇಶ್ ಆರೋಪಕ್ಕೆ ಸಚಿವ ಕೆ. ಗೋಪಾಲಯ್ಯ ಪ್ರತಿಕ್ರಿಯೆ:
ಇದಕ್ಕೆ ಕೆ. ಗೋಪಾಲಯ್ಯ ಪ್ರತಿಕ್ರಿಯಿಸಿ, ಮುಖ್ಯಮಂತ್ರಿಗಳು ಹೇಳಿದ ಮಾತನ್ನು ಎಂದು ತಪ್ಪುವುದಿಲ್ಲ. ಬೇಲೂರು ಮತ್ತು ಹಳೇಬೀಡು ರೈತರ ಸಮಸ್ಯೆ ಅಷ್ಟೇ ಅಲ್ಲ, ಜಿಲ್ಲೆಯ ಯಾವುದೇ ಸಮಸ್ಯೆ ಇದ್ದರೂ ಅದನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ನಾನೇ ಖುದ್ದು ಸಂಬಂಧಪಟ್ಟ ಮಂತ್ರಿಗಳ ಬಳಿ ಮಾತನಾಡುತ್ತೇನೆ. ರಣಘಟ್ಟ ಮತ್ತು ಹಳೇಬೀಡು ಮಾದಿಹಳ್ಳಿ ಏತನೀರಾವರಿ, ಹಾಗೂ ರಾಜನಶಿರಿಯೂರು ಏತ ನೀರಾವರಿ ಯೋಜನೆಗಳಿಗೆ ಸ್ವತ: ಮುಖ್ಯಮಂತ್ರಿಗಳ ಬಳಿ ನಾನೇ ಕರೆದುಕೊಂಡು ಹೋಗಿ ಮುಂದಿನ ಬಜೆಟ್ ನಲ್ಲಿ ಇದನ್ನ ಸೇರಿಸಬೇಕು ಎಂದು ಒತ್ತಡ ಹೇರುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದ್ರು.
ಒಟ್ಟಾರೆ ಅಧಿಕಾರವಿಲ್ಲದ ವೇಳೆ ಹಾಸನ ಜಿಲ್ಲೆಗೆ ಅಭಿವೃದ್ಧಿ ಕಾರ್ಯಗಳು ಆಗಬೇಕು, ಅದನ್ನು ಆಡಳಿತಾರೂಢ ಸರ್ಕಾರಗಳು ಮಾಡುತ್ತಿಲ್ಲ ಎನ್ನುತ್ತಿದ್ದ ಬಿಜೆಪಿ, ಈಗ ತಾನೇ ಆಡಳಿತರೂಢ ಸರ್ಕಾರದ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆದರೆ ಕುಮಾರಸ್ವಾಮಿಯವರ ಯೋಜನೆಯನ್ನು ತಡೆಹಿಡಿಯುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಬೇಲೂರು ಶಾಸಕರು ಪರೋಕ್ಷವಾಗಿ ಆರೋಪ ಮಾಡುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.