ಹಾಸನ : ಟೋಲ್ ಹಣ ಪಾವತಿಸಲು ಕೇಂದ್ರ ಸರ್ಕಾರ ಫಾಸ್ಟ್ಯಾಗ್ ಕಡ್ಡಾಯಗೊಳಿಸಿರುವುದರ ವಿರುದ್ಧ ಜಿಲ್ಲೆಯ ಜನ ಆಕ್ರೋಶ ವ್ಯಕ್ತಪಡಿಸಿದ್ದು, ಜನ ಸಾಮಾನ್ಯರಿಗೆ ಹೊರೆಯಾಗುವ ಇಂತಹ ಯೋಜನೆಗಳನ್ನು ಅಥವಾ ಆದೇಶಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಈಗಾಗಲೇ ಕೋವಿಡ್ ಮಹಾಮಾರಿ ಜನಸಾಮಾನ್ಯರ ಬದುಕನ್ನು ಬುಡಮೇಲು ಮಾಡಿದೆ. ಅದರಿಂದ ಹೊರ ಬರುವಷ್ಟರಲ್ಲಿ, ನಿನ್ನೆಯಿಂದ ಪ್ರತಿ ಕುಟುಂಬಕ್ಕೂ ಅತ್ಯವಶ್ಯಕವಾಗಿರುವ ಗ್ಯಾಸ್ ಸಿಲಿಂಡರ್ ರಿಫೀಲ್ ಬೆಲೆಯನ್ನು 50 ರೂಪಾಯಿ ಹೆಚ್ಚಳ ಮಾಡಲಾಗಿದೆ. ಅಲ್ಲದೆ, ಆಹಾರ ಮತ್ತು ನಾಗರಿಕ ಸಚಿವ ಉಮೇಶ್ ಕತ್ತಿ ಬೈಕ್, ಟಿವಿ ಇರುವವರಿಗೆ ಬಿಪಿಎಲ್ ಕಾರ್ಡ್ ಸೌಲಭ್ಯ ಇಲ್ಲ ಎಂದಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಮೇಶ್ ಕತ್ತಿಯವರೇ ನಿಮ್ಮ ಕಾರ್ಖಾನೆಯಲ್ಲಿ ಬಡ ಜನರಿಲ್ಲವೇ..?
ಕೇವಲ ಅಂಬಾನಿ ಮತ್ತು ಅದಾನಿಯಂತಹ ಶ್ರೀಮಂತರಿಗೆ ಅನುಕೂಲ ಮಾಡಿಕೊಡುವ ಒಂದೇ ಒಂದು ಉದ್ದೇಶದಿಂದ ಯೋಜನೆಗಳನ್ನು ಜಾರಿಗೆ ತರಲಾಗ್ತಿದೆ. ಶ್ರೀಮಂತರು ಮಾತ್ರ ಮನೆಯಲ್ಲಿ ಟಿವಿ, ಫ್ರಿಡ್ಜ್, ದ್ವಿಚಕ್ರ ವಾಹನ ಹೊಂದಿರಬೇಕು. ಬಡವ ತನ್ನ ಜೀವನ ನಿರ್ವಹಣೆಗೆ ವ್ಯಾಪಾರ ವಹಿವಾಟಿಗೆ ಅನುಕೂಲವಾಗುವಂತಹ ವಾಹನವನ್ನು ಖರೀದಿಸಿದರೆ, ಆತನಿಗೆ ಬಿಪಿಎಲ್ ಕಾರ್ಡ್ ಕಟ್ ಮಾಡುವುದಾಗಿ ಉಮೇಶ್ ಕತ್ತಿ ಹೇಳ್ತಾರೆ. ಅವರು ನೀಡಿರುವ ಹೇಳಿಕೆಯನ್ನು ಕೂಡಲೇ ವಾಪಸ್ ಪಡೆಯಬೇಕು. ಅವರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಬಡವರಲ್ಲವೇ..? ಅವರು ಟಿವಿ ಹೊಂದಬಾರದೇ..? ಹೇಳಿಕೆ ಕೊಡಬೇಕಾದರೆ ಯೋಚಿಸಿ ಕೊಡಬೇಕು ಎಂದು ಸಾರ್ವಜನಿಕರು ಹೇಳಿದ್ದಾರೆ.
"ಜಿಡಿಪಿ ಅಂದ್ರೆ ಗ್ಯಾಸ್, ಡಿಸೇಲ್, ಪೆಟ್ರೋಲ್ ಅಂತೆ"
ಪ್ರಧಾನಿ ನರೇಂದ್ರ ಮೋದಿಯವರು ಜಿಡಿಪಿಯನ್ನು ಮೇಲೆತ್ತುತ್ತೇವೆ ಎಂದಿದ್ದರು. ಜಿಡಿಪಿ ಅಂದರೆ (G) ಗ್ಯಾಸ್, (D)ಡಿಸೇಲ್, (P) ಪೆಟ್ರೋಲ್ ದರ ಹೆಚ್ಚಳ ಮಾಡುವುದು ಎಂಬರ್ಥವನ್ನ ಮೋದಿಯವರು ಜನರಿಗೆ ಪರೋಕ್ಷವಾಗಿ ತೋರಿಸಿಕೊಟ್ಟಿದ್ದಾರೆ. ಈಗ ಜಿಡಿಪಿ ದರ ದುಪ್ಪಟ್ಟಾಗುತ್ತಿದೆ ಎಂದು ಸಾರ್ವಜನಿಕರು ವ್ಯಂಗ್ಯವಾಡುತ್ತಿದ್ದಾರೆ. ಕೇವಲ ತಮ್ಮ ಪಕ್ಷಕ್ಕೆ ಅನುಕೂಲವಾಗುವ ಕೆಲವು ಉದ್ಯಮಿಗಳನ್ನು ಮತ್ತು ಬಂಡವಾಳ ಶಾಹಿಗಳನ್ನು ಗುರಿಯಾಗಿಟ್ಟುಕೊಂಡು ಅವರಿಗಾಗಿ ಬಡವರ ರಕ್ತ ಹೀರುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರೋಡ್ ಟ್ಯಾಕ್ಸ್ ನಿಷೇಧಿಸಿ, ಇಲ್ಲ ಟೋಲ್ ಸುಂಕ ನಿಷೇಧಿಸಿ :
ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿರುವುದರಿಂದ ಪ್ರತಿ ವಾಹನ ಸವಾರರಿಗೆ ಹಾಸನದಿಂದ ಬೆಂಗಳೂರಿಗೆ ಹೋಗಲು ಹೆಚ್ಚುವರಿಯಾಗಿ 100 ರಿಂದ 125 ರೂಪಾಯಿ ಕಟ್ಟಬೇಕು. ಇಂತಹ ನಿರ್ಧಾರಗಳನ್ನು ಜಾರಿಗೆ ತರುವುದು ನಿಜಕ್ಕೂ ಖಂಡನೀಯ. ಕೂಡಲೇ ಪೆಟ್ರೋಲ್, ಡೀಸೆಲ್ , ಗ್ಯಾಸ್, ಫಾಸ್ಟ್ಯಾಗ್ ಶುಲ್ಕ ಇಳಿಸಬೇಕು. ವಾಹನ ಖರೀದಿಸುವಾಗ ಕಟ್ಟುವಂತಹ ಶಾಶ್ವತ ರಸ್ತೆ ಸುಂಕವನ್ನು ಕಡಿತಗೊಳಿಸಬೇಕು. ಇಲ್ಲ ಟೋಲ್ ಶುಲ್ಕವನ್ನು ಶಾಶ್ವತವಾಗಿ ನಿಲ್ಲಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರು ನಿಮಗೆ ತಕ್ಕ ಉತ್ತರ ನೀಡುತ್ತಾರೆ ಎಂದು ಜನ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಹಾಸನದಿಂದ ಬೆಂಗಳೂರಿಗೆ ಹೋಗುವ ಮಾರ್ಗದಲ್ಲಿ ಸುಮಾರು 5 ಸುಂಕ ಕೇಂದ್ರಗಳು ಇದ್ದರೆ, ಹಾಸನದಿಂದ ಅರಕಲಗೂಡು ಮಾರ್ಗವಾಗಿ 2 ಸುಂಕ ಕೇಂದ್ರಗಳು ಹಣ ವಸೂಲಿ ಮಾಡುತ್ತಿವೆ. ಈಗಾಗಲೇ ಸಕಲೇಶಪುರ ಮತ್ತು ಬೇಲೂರಿನ ರಸ್ತೆ ಕಾಮಗಾರಿ ಪ್ರಾರಂಭವಾಗಿದ್ದು, ಅಲ್ಲಿಯೂ ರಸ್ತೆ ಸುಂಕ ಕಟ್ಟಲು ಯೋಜನೆ ರೂಪಿಸಿದ್ದಾರೆ. ವಾಹನಗಳನ್ನು ಖರೀದಿಸುವ ಸಂದರ್ಭದಲ್ಲಿ ಕಟ್ಟುವಂತಹ ಶಾಶ್ವತ ರಸ್ತೆ ಸುಂಕವನ್ನು ಹೊರತುಪಡಿಸಿ, ಇನ್ಯಾವುದೇ ಸುಂಕ ಪಡೆಯಬಾರದು ಎಂದು ಆಗ್ರಹಿಸಿದ್ಧಾರೆ.