ಅರಕಲಗೂಡು ( ಹಾಸನ): ಕೊರೊನಾ ಲಾಕ್ಡೌನ್ನಿಂದಾಗಿ ಪಟ್ಟಣದ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಬೀದರ್ ಜಿಲ್ಲೆಯ 10 ಮಂದಿ ನಿರಾಶ್ರಿತರನ್ನು ತಾಲೂಕು ಆಡಳಿತದ ವತಿಯಿಂದ ಶನಿವಾರ ಸಂಜೆ ತಮ್ಮ ಊರಿಗೆ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಮಾಡಿ ಕಳಿಸಿಕೊಡಲಾಯ್ತು.
ಮಾಧ್ಯಮಗಳೊಂದಿಗೆ ಮಾತನಾಡಿದ ತಹಶಿಲ್ದಾರ್ ವೈ.ಎಂ. ರೇಣುಕುಮಾರ್, ಹಳ್ಳಿ ಹಳ್ಳಿಗಳಿಗೆ ತೆರಳಿ ಡ್ರಂಗಳು, ಮತ್ತಿತರ ಪಾತ್ರೆ ವಸ್ತುಗಳನ್ನು ಮಾರಾಟ ಮಾಡುತ್ತಾ ತಾಲೂಕಿನಾದ್ಯಂತ ಅಲ್ಲಲ್ಲಿ ಟೆಂಟ್ ಹಾಕಿಕೊಂಡು ಜೀವನ ಸಾಗಿಸುತ್ತಿದ್ದ ಬೀದರ್ ಜಿಲ್ಲೆ ಹುಮ್ನಾಬಾದ್ ತಾಲೂಕು ಮಂಗಲಗಿ ಗ್ರಾಮದ 10 ಮಂದಿ ಲಾಕ್ಡೌನ್ ಪರಿಣಾಮ ರಾಮನಾಥಪುರದಲ್ಲೇ ನೆಲೆಸಿದ್ದರು. ಎಲ್ಲರ ಆರೋಗ್ಯ ತಪಾಸಣೆ ನಡೆಸಿ ಅರಕಲಗೂಡು ನಿರಾಶ್ರಿತರ ಕೇಂದ್ರದಲ್ಲಿ ತಂಗಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಊಟ, ತಿಂಡಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿ ನಿರಾಶ್ರಿತರಿಗೆ ಯಾವುದೇ ಕೊರತೆ ಎದುರಾಗದಂತೆ ನಿಗಾ ವಹಿಸಲಾಗಿತ್ತು. ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ಸೌಲಭ್ಯ ಕೂಡಾ ಒದಗಿಸಲಾಗಿತ್ತು. ಇಂದು ಸರ್ಕಾರದ ಆದೇಶದ ಮೇರೆಗೆ ನಿರಾಶ್ರಿತರಿಗೆ ಉಚಿತವಾಗಿ ಬಸ್ ವ್ಯವಸ್ಥೆ ಮಾಡಿ ಸ್ವಗ್ರಾಮಕ್ಕೆ ಕಳಿಸಿಕೊಡಲಾಯ್ತು. ನಿರಾಶ್ರಿತರು ಬಸ್ನಲ್ಲೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂಬ ಉದ್ದೇಶದಿಂದ 10 ಮಂದಿಗೆ ಸೇರಿ ಒಂದು ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಸ್ವಾಮಿಗೌಡ, ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ದೀಪಕ್, ಸಮಾಜ ಕಲ್ಯಾಣಾಧಿಕಾರಿ ಭಾಗೀರಥಿ, ಸಿಪಿಐ ದೀಪಕ್, ಸಬ್ ಇನ್ಸ್ಪೆಕ್ಟರ್ ವಿಜಯಕೃಷ್ಣ ಹಾಗೂ ಇನ್ನಿತರರು ಈ ವೇಳೆ ಉಪಸ್ಥಿತರಿದ್ದರು.