ಹಾಸನ: ಇತ್ತೀಚೆಗೆ ನಗರದಲ್ಲಿ ನಡೆದ ಮಿಕ್ಸಿ ಸ್ಫೋಟ ಪ್ರಕರಣಕ್ಕೆ ಪ್ರೇಮ ವೈಫಲ್ಯವೇ ಪ್ರಮುಖ ಕಾರಣ ಎಂದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ವಿಧವೆಯೊಬ್ಬರು ಮದುವೆ ಪ್ರಸ್ತಾಪ ನಿರಾಕರಿಸಿದ್ದರಿಂದ ಕೋಪಗೊಂಡ ಪ್ರೇಮಿ ಆಕೆಯ ಬದುಕು ಹಾಳು ಮಾಡಲು ಎಸಗಿರುವ ಹುನ್ನಾರವಿದು ಎಂದು ತಿಳಿದುಬಂದಿದೆ. ಇಬ್ಬರ ಪ್ರೇಮಪುರಾಣದಲ್ಲಿ ಶಿಕ್ಷೆ ಅನುಭವಿಸಿದ್ದು ಮಾತ್ರ ಡಿಟಿಡಿಸಿ ಕೊರಿಯರ್ ಮಾಲೀಕ ಶಶಿಕುಮಾರ್. ಈತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ನಗರದ ಕೆ.ಆರ್.ಪುರಂ ಬಡಾವಣೆಯ ಡಿಟಿಡಿಸಿ ಕೊರಿಯರ್ ಶಾಪ್‌ನಲ್ಲಿ ಡಿಸೆಂಬರ್ 26ರಂದು ಸ್ಫೋಟ ಪ್ರಕರಣ ನಡೆದಿತ್ತು. ಬೆಂಗಳೂರಿನ ಅನುಪ್ ಕುಮಾರ್ ಎಂಬಾತ ಮಹಿಳೆಯ ಹತ್ಯೆಗೆ ಸಂಚು ರೂಪಿಸಿ ಮಿಕ್ಸರ್‌ನಲ್ಲಿ ಸ್ಫೋಟಕ ಇಟ್ಟು ಕಳುಹಿಸಿದ್ದ.
ಮ್ಯಾಟ್ರಿಮೋನಿ ಸೈಟ್‌ಗಳಲ್ಲಿ ವರ ಬೇಕಾಗಿದ್ದಾನೆ ಎಂಬ ಫೋಟೋ ನೋಡಿದ ಆರೋಪಿ ಅನುಪ್ ಕುಮಾರ್ ಹಾಸನದ ನಿವಾಸಿ ವಿಧವೆ ವಸಂತ ಎಂಬುವರನ್ನು ಮದುವೆಯಾಗಲು ಒಪ್ಪಿದ್ದ. ಮಹಿಳೆಯ ಸೌಂದರ್ಯಕ್ಕೆ ಮಾರು ಹೋಗಿದ್ದ ಆತ ಮದುವೆ ಪ್ರಸ್ತಾಪ ಇಟ್ಟಿದ್ದನು. ಇದನ್ನು ಒಪ್ಪಿಕೊಂಡಿದ್ದ ಮಹಿಳೆ ಅನುಪ್‌ನೊಂದಿಗೆ ಸಾಕಷ್ಟು ಬಾರಿ ಸುತ್ತಾಡಿದ್ದರು. ಆತನ ವಿಶ್ವಾಸಗಳಿಸಿ ಲಕ್ಷಾಂತರ ರೂಪಾಯಿ ಹಣ ಸಾಲ ಪಡೆದಿದ್ದರು ಎನ್ನಲಾಗಿದೆ. ಕೊಟ್ಟ ಹಣ ವಾಪಸ್ ನೀಡದೇ ಮದುವೆಗೂ ಒಪ್ಪದೆ ಮಹಿಳೆ ಅನುಪ್‌ನಿಂದ ಅಂತರ ಕಾಯ್ದುಕೊಂಡಿದ್ದರು. ಇದರಿಂದ ತೀವ್ರ ನಿರಾಸೆಗೊಳಗಾದ ಆರೋಪಿ ಒಂದೋ ಮದುವೆಯಾಗಬೇಕು ಇಲ್ಲವೇ ಹಣ ವಾಪಸ್ ನೀಡಬೇಕು ಎಂದು ಮಹಿಳೆಗೆ ಒತ್ತಾಯಿಸಿದ್ದಾನೆ.
ಈ ಮಧ್ಯೆ ಒಂದೆರಡು ಬಾರಿ ಹಾಸನಕ್ಕೆ ಬಂದು ಮಹಿಳೆಯ ಮನೆಯೆದುರು ಗಲಾಟೆ ಸಹ ಮಾಡಿದ್ದಾನೆ. ಅನುಪ್ ವಿರುದ್ಧ ಮಹಿಳೆ ಮಹಿಳಾ ಆಯೋಗ ಮತ್ತು ಪೊಲೀಸರಿಗೆ ದೂರು ನೀಡಿದ್ದರು. ಹಣ ಪಡೆದು ಮದುವೆಯಾಗಲು ನಿರಾಕರಿಸಿದ ಮಹಿಳೆ ಮತ್ಯಾರಿಗೂ ಮೋಸ ಮಾಡಬಾರದೆಂಬ ಉದ್ದೇಶದಿಂದ ಆಕೆಯ ಮುಖವನ್ನು ವಿರೂಪಗೊಳಿಸಬೇಕು. ಇಲ್ಲವಾದರೆ ಆಕೆ ಸಾಯಬೇಕು ಎಂದು ಯೋಚಿಸಿದ್ದ ಅನುಪ್, ಮೊದಲು ಸೀರೆ, ಹಣ ಮತ್ತು ಮಹಿಳೆಯರು ಉಪಯೋಗಿಸುವಂಥ ಕೆಲವು ವಸ್ತುಗಳನ್ನು ಪಾರ್ಸಲ್ ಮೂಲಕ ಕಳುಹಿಸಿದ್ದಾನೆ. ಇದೆಲ್ಲವನ್ನೂ ನಿರಾಕರಿಸಿದ್ದ ಮಹಿಳೆಗೆ ಕೊನೆಗೆ ಮಿಕ್ಸಿಯಲ್ಲಿ ಡಿಟೋನೇಟರ್ ಇಟ್ಟು ಕಳುಹಿಸಿದ್ದಾನೆ.
ಆದರೆ ಪದೇ ಪದೇ ಬರುತ್ತಿದ್ದ ಪಾರ್ಸೆಲ್ದಿಂದ ಅನುಮಾನಗೊಂಡಿದ್ದ ಮಹಿಳೆ ಪಾರ್ಸೆಲ್ ತೆರೆಯುವ ಮುನ್ನ ವಿಡಿಯೋ ಮಾಡುತ್ತಿದ್ದಳು. ಮಿಕ್ಸಿ ತೆರೆಯುವ ಮುನ್ನವೂ ವಿಡಿಯೋ ಮಾಡಿದ್ದಾಳೆ. ಆದರೆ ಅನುಮಾನ ಬಂದು ಅರ್ಧಕ್ಕೆ ನಿಲ್ಲಿಸಿ ನಂತರ ಅದನ್ನು ಕೊರಿಯರ್‌ನವರಿಗೆ ವಾಪಸ್ ನೀಡಿದ್ದಾಳೆ. ವಾಪಸ್ ಕಳುಹಿಸಲು ಶುಲ್ಕ ಪಾವತಿಸಬೇಕು ಎಂದು ಕೊರಿಯರ್‌ಬಾಯ್ ಕೇಳಿದ್ದಾನೆ. ಆದರೆ ಆಕೆ ಹಣ ನೀಡಲಿಲ್ಲ. ವಸ್ತುವನ್ನು ಹಿಂದಕ್ಕೆ ಕಳಿಸಲು ಸೂಕ್ತ ವಿಳಾಸವಿಲ್ಲದೇ ಕೊರಿಯರ್ ಅಂಗಡಿ ಮಾಲೀಕ ಅದನ್ನು ಬಿಚ್ಚಿ ಪರಿಶೀಲನೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ದಿಢೀರ್ ಸ್ಫೋಟ ಸಂಭವಿಸಿದೆ. ಕೊರಿಯರ್ ಮಾಲೀಕ ಶಶಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವಿನ ದವಡೆಯಿಂದ ಪಾರಾಗಿದ್ದಾನೆ. ಇಬ್ಬರು ಪ್ರೇಮಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹಾಸನ ಎಸ್ಪಿ ಹರಿರಾಂ ಶಂಕರ್ ಹೇಳಿಕೆ: 'ಹಾಸನ ನಗರದ ಕೆ.ಆರ್.ಪುರಂ ಬಡಾವಣೆಯ ಡಿಟಿಡಿಸಿ ಕೊರಿಯರ್ ಶಾಪ್‌ನಲ್ಲಿ ಡಿಸೆಂಬರ್ 26ರಂದು ಮಿಕ್ಸಿ ಸ್ಫೋಟದ ಪ್ರಕರಣದಲ್ಲಿ ಅನುಮಾನ ಕಾಣಿಸಿತು. ಕಂಪನಿಯಿಂದ ಬಂದ ಸರಕು ಈ ರೀತಿ ಸ್ಫೋಟ ಆಗೋದಿಲ್ಲ ಎಂಬ ಶಂಕೆ ವ್ಯಕ್ತವಾಯಿತು. ಆಳವಾಗಿ ತನಿಖೆಗೆ ಒಳಪಡಿಸಿದಾಗ ಕೆ.ಆರ್.ಪುರಂ ಮಹಿಳೆಗೆ ಈ ಪಾರ್ಸೆಲ್ ಬಂದಿದ್ದು ಗೊತ್ತಾಗಿದೆ. ಆದರೆ ಆ ಮಹಿಳೆ ಆ ಪಾರ್ಸಲ್ ಬೇಡವೆಂದು ಡಿಟಿಡಿಸಿ ಕಚೇರಿಗೆ ವಾಪಸ್ ಮಾಡಿದ್ದರು. ರಿಟರ್ನ್ ಕೊಡುವುದಾದರೆ ಅದಕ್ಕೆ ವಾಪಸ್ ಚಾರ್ಜ್ ಕೊಡಬೇಕು ಅಂದಾಗ, ಹಣ ಕೊಡಲು ಆಗೋದಿಲ್ಲ. ಬೇಕಾದರೆ ನೀವೇ ಇಟ್ಟುಕೊಳ್ಳಿ, ಇಲ್ಲವಾದ್ರೆ ಹಿಂತಿರುಗಿಸಿ ಎಂದು ಹೇಳಿದ್ದರು.
ಆದರೆ ಡಿಟಿಡಿಸಿಯ ಮಾಲೀಕ ಶಶಿಕುಮಾರ ಪಾರ್ಸಲ್ ಹಿಂದಕ್ಕೆ ಕಳಿಸಿದೇ, ಅದರಲ್ಲಿ ಏನಿದೆ ಎಂಬುದನ್ನು ನೋಡುತ್ತಿದ್ದಾಗ ಮಿಕ್ಸಿ ಸ್ಪೋಟಗೊಂಡಿದೆ. ಘಟನೆಯ ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಪೊಲೀಸರ ತಂಡ ರಚಿಸಲಾಯಿತು. ತೀವ್ರ ತನಿಖೆ ನಡೆಸಿದ ಬಳಿಕ ಇಬ್ಬರ ಪ್ರೇಮ ವೈಫಲ್ಯದಿಂದ ವಿಧವೆಯೊಬ್ಬರು ಮದುವೆ ಪ್ರಸ್ತಾಪ ನಿರಾಕರಿಸಿದ್ದರಿಂದ ಕೋಪಗೊಂಡ ಪ್ರೇಮಿ ಆಕೆಯ ಬದುಕು ಹಾಳು ಮಾಡಲು ಎಸಗಿರುವ ಹುನ್ನಾರ ಎಂದು ಗೊತ್ತಾಗಿದೆ' ಹಾಸನ ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಇದನ್ನೂಓದಿ: ಕೆ.ಪಿ ಅಗ್ರಹಾರದಲ್ಲಿ ವ್ಯಕ್ತಿಯ ಬರ್ಬರ ಹತ್ಯೆ ಪ್ರಕರಣ: ತಿಂಗಳ ಬಳಿಕ ಪ್ರಮುಖ ಆರೋಪಿ ಬಂಧನ