ಹಾಸನ: ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಕೈಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿದೆ.
ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಅಂತಿಮ ಮತದಾರರ ಪಟ್ಟಿ ಹಾಗೂ ಮತಗಟ್ಟೆಗಳನ್ನೂ ಗುರುತು ಮಾಡಲಾಗಿದೆ. ಈ ಬಾರಿ ಚುನಾವಣೆಯಲ್ಲಿ 11,43,017 ಮತದಾರರು ಹಕ್ಕು ಚಲಾಯಿಸುವ ಅರ್ಹತೆ ಪಡೆದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 267 ಗ್ರಾಮ ಪಂಚಾಯಿತಿಗಳ ಪೈಕಿ ಅವಧಿ ಮುಗಿದಿರುವ 255 ಪಂಚಾಯಿತಿಗಳಿಗೆ ಚುನಾವಣೆ ನಡೆಯಬೇಕಿದೆ. ಇದಕ್ಕಾಗಿ 2040 ಮತಗಟ್ಟೆಗಳನ್ನು ಗುರುತಿಸಲಾಗಿದೆ.
ಉಳಿದ 12 ಗ್ರಾಮ ಪಂಚಾಯಿತಿಗಳ ಅವಧಿ ಮುಂದಿನ ಡಿಸೆಂಬರ್‌ಗೆ ಅಂತ್ಯಗೊಳ್ಳಲಿದೆ. ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ 11,43,017 ಮತದಾರರು ಇದ್ದಾರೆ. ಈ ಪೈಕಿ ಪುರುಷ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. 5,76,938 ಪುರುಷ ಮತದಾರರಿದ್ದರೆ, 5,66,059 ಮಹಿಳೆಯರು ಮತ ಚಲಾವಣೆ ಹಕ್ಕು ಹೊಂದಿದ್ದು, 20 ಮಂದಿ ಇತರ ಮತದಾರರಿದ್ದಾರೆ.
ಆಲೂರು ತಾಲೂಕಿನ ಒಟ್ಟು 15 ಗ್ರಾಮ ಪಂಚಾಯಿತಿ ಪೈಕಿ 14ಕ್ಕೆ ಚುನಾವಣೆ ನಡೆಯಬೇಕಿದೆ. ಹಂಚೂರು ಪಂಚಾಯಿತಿ ಅವಧಿ ಇನ್ನೂ ಮುಗಿದಿಲ್ಲ. ಅರಕಲಗೂಡು ತಾಲೂಕಿನ ಕೊಣನೂರು ಪಂಚಾಯಿತಿ ಹೊರತು ಪಡಿಸಿ ಉಳಿದ 35 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ. ಅರಸೀಕೆರೆ ತಾಲೂಕಿನ ನೇರ್ಲಿಗೆ, ಬಾಣವಾರ ಹೊರತು ಪಡಿಸಿ 43 ಪಂಚಾಯಿತಿಗಳಿಗೆ ಹಾಗೂ ಬೇಲೂರು ತಾಲೂಕಿನ 37 ಗ್ರಾಮ ಪಂಚಾಯಿತಿಗಳಿಗೂ ಚುನಾವಣೆ ನಡೆಯಬೇಕಿದೆ.
ಹಾಸನ ತಾಲೂಕಿನ 36 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ. ಐದು ಗ್ರಾಮ ಪಂಚಾಯಿತಿ ಅವಧಿ ಡಿಸೆಂಬರ್‌ಗೆ ಪೂರ್ಣಗೊಳ್ಳಲಿದೆ. ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಗ್ರಾಮ ಪಂಚಾಯಿತಿ ಹೊರತು ಪಡಿಸಿ ಉಳಿದ 40 ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಸಕಲೇಶಪುರ ತಾಲೂಕಿನ ವಣಗೂರು ಮತ್ತು ಉಚ್ಚಂಗಿ ಹೊರತು ಪಡಿಸಿ 22 ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಹೊಳೆನರಸೀಪುರ ತಾಲೂಕಿನ 26 ಗ್ರಾಮ ಪಂಚಾಯಿತಿಗಳಿಗೂ ಚುನಾವಣೆ ನಡೆಯಬೇಕಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪಟ್ಟಿ ಪ್ರಕಟವಾಗಿದೆ. ಚುನಾವಣಾ ಆಯೋಗ ಯಾವಾಗ ಬೇಕಾದರೂ ದಿನಾಂಕ ಘೋಷಿಸಬಹುದು. ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಚುನಾವಣೆಯ ವೇಳಾಪಟ್ಟಿ ಪ್ರಕಟಿಸಬಹುದು ಎಂದು ಹೇಳಲಾಗುತ್ತಿದೆ. ಚುನಾವಣಾ ಆಯೋಗದ ನಿರ್ದೇಶನದಂದತೆ ಗ್ರಾಮ ಪಂಚಾಯಿತಿ ಚುನಾವಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯಾವುದೇ ದೋಷವಿಲ್ಲದ್ದಂತೆ ಮತದಾರರ ಪಟ್ಟಿ ಸಿದ್ಧ ಪಡಿಸಲಾಗಿದೆ.
ಹಿಂದೆ ಹೆಸರು ನಾಪತ್ತೆ, ಹೆಸರು ಅದಲು – ಬದಲು, ತಪ್ಪು ವಿಳಾಸ ನಮೂದು ಬಗ್ಗೆ ದೂರುಗಳು ಇದ್ದವು. ಈಗ ಎಲ್ಲವನ್ನು ಸರಿಪಡಿಸಲಾಗಿದ್ದು, ಮತಗಟ್ಟೆಗಳನ್ನೂ ಗುರುತು ಮಾಡಲಾಗಿದೆ. ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ ಕೂಡಲೇ ಚುನಾವಣೆ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಚುನಾವಣಾ ಶಾಖೆ ತಹಶೀಲ್ದಾರ್ ಪದ್ಮನಾಭಶಾಸ್ತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಚುನಾವಣೆ ಘೋಷಣೆಗೂ ಮುನ್ನವೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ತಳ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಈ ಚುನಾವಣೆ ಸಹಕಾರಿ ಆಗುವುದರಿಂದ ರಾಜಕೀಯ ಪಕ್ಷಗಳು ಹೆಚ್ಚಿನ ಆದ್ಯತೆ ನೀಡಿವೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರು ಜಿಲ್ಲೆಗೆ ಭೇಟಿ ನೀಡಿದಾಗಲೆಲ್ಲಾ, ಗ್ರಾಮ ಪಂಚಾಯಿತಿ ಬಗ್ಗೆ ಹೆಚ್ಚು ಗಮನಹರಿಸುವಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸೂಚನೆ ನೀಡುತ್ತಿದ್ದಾರೆ.