ಹಾಸನ : ಜಿಪಂ ಅಧ್ಯಕ್ಷರ ವಿವೇಚನಾ ನಿಧಿಯಲ್ಲಿ ಒಂದು ಕೋಟಿ ರೂ. ಅನುದಾನ ಬಂದಿದೆ. ಪ್ರತಿ ಸದಸ್ಯರಿಗೂ ಎರಡೆರಡು ಲಕ್ಷ ನೀಡಿ ಉಳಿದ ಹಣವನ್ನು ಬೇಕಾದ್ರೇ ಅಧ್ಯಕ್ಷರ ಕ್ಷೇತ್ರಕ್ಕೆ ಹೆಚ್ಚಿಗೆ ಇಟ್ಟುಕೊಳ್ಳಲಿ ಎಂದು ಜಿಪಂ ಉಪಾಧ್ಯಕ್ಷ ಹೆಚ್ ಪಿ ಸ್ವರೂಪ್ ಸಲಹೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಪಂ ಅಧ್ಯಕ್ಷರು ಯಾವ ಸದಸ್ಯರ ಗಮನಕ್ಕೆ ತರದೇ ಅವರ ಸ್ವಂತ ನಿರ್ಧಾರದಲ್ಲಿ ಶಿಕ್ಷಕರ ದಿನಾಚರಣೆ ಇದ್ದರೂ ಕೂಡ ಶನಿವಾರ ವಿಶೇಷ ಸಭೆ ಕರೆದಿದ್ದರು. ಎಲ್ಲಾ ಸದಸ್ಯರು ಕೂಡ ಅವರವರ ಕ್ಷೇತ್ರದಲ್ಲಿ ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಬೇಕಾಗಿದ್ದರಿಂದ ಸದಸ್ಯರು ಹಾಜರಾಗಿಲ್ಲ ಎಂದರು.
ಮುಂದೆ 7 ದಿನದಲ್ಲಿ ಮತ್ತೆ ವಿಶೇಷ ಸಭೆ ಕರೆಯವುದು ಬೇಡ, ಸಾಮಾನ್ಯ ಸಭೆ ಕರೆದರೆ ಎಲ್ಲಾ ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡಿ ಅವರವರ ಕ್ಷೇತ್ರದ ಕುಂದುಕೊರತೆಯನ್ನು ಹೇಳಿ ಚರ್ಚಿಸಲಾಗುವುದು. ಆದ್ದರಿಂದ ಜಿಪಂ ಅಧ್ಯಕ್ಷರು ವಿಶೇಷ ಸಭೆ ಕರೆಯದೇ ಸಮಾನ್ಯ ಸಭೆ ಕರೆಯುವಂತೆ ಮನವಿ ಮಾಡುವುದಾಗಿ ಹೇಳಿದರು.
ಲಿಫ್ಟ್, ಪ್ರವಾಸ ಭತ್ಯೆ ಹಾಗೂ ನಕಲಿ ಸಹಿ ವಿಚಾರವಾಗಿ ಜಿಪಂ ಸಿಇಒ ಅವರು ಸಿಒಡಿ ತನಿಖೆಗೊಳಪಡಿಸಬೇಕು. ಉದ್ದೇಶಪೂರ್ವಕವಾಗಿ ಜಿಪಂ ವಿಶೇಷ ಸಭೆಯನ್ನು ಶನಿವಾರ ನಿಗದಿ ಮಾಡಿರುವುದಾಗಿ ದೂರಿದ ಅವರು, ಜಿಪಂ ಈ ಸಾಲಿನ ಅವಧಿ ಇನ್ನೂ ಐದಾರು ತಿಂಗಳು ಮಾತ್ರ ಇದೆ. ಕುಡಿಯುವ ನೀರಿಗಾಗಿ ಅಧ್ಯಕ್ಷರ ವಿವೇಚನಾ ನಿಧಿಗೆ ಒಂದು ಕೋಟಿ ರೂ. ಅನುದಾನ ಬಂದಿದೆ. ಈ ಹಣದಲ್ಲಿ 40 ಲಕ್ಷ ರೂ. ಅಧ್ಯಕ್ಷರ ಕ್ಷೇತ್ರಕ್ಕೆ ಹಾಕಿಕೊಳ್ಳಲಾಗಿದೆ.
ಇಷ್ಟಲ್ಲದೇ ಹಳೆಯ ಕೊಳವೆ ಬಾವಿ ಎಲ್ಲೆಲ್ಲಿ ಇದೆ, ಅದಕ್ಕೆ ಬಿಲ್ ಪಾಸ್ ಮಾಡಿಕೊಳ್ಳಲಾಗಿದೆ. ಅನುದಾನವನ್ನು ಎಲ್ಲಾ ಕ್ಷೇತ್ರಗಳಿಗೂ ಕೊಡಬೇಕು. ಇಲ್ಲವಾದ್ರೇ ಅದಕ್ಕೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಪಂಚಾಯತ್‌ಗೆ ಅಧ್ಯಕ್ಷರಾಗಿರುವುದು ಕಾಂಗ್ರೆಸ್ ಜಿಪಂ ಸದಸ್ಯರಿಗೆ ಮಾತ್ರವಲ್ಲ. 40 ಜನ ಸದಸ್ಯರಿಗೆಲ್ಲಾ ಅಧ್ಯಕ್ಷರೇ ಆಗಿರುತ್ತಾರೆ ಎಂಬುದನ್ನು ಮರೆಯಬಾರದು. ಒಂದು ಕೋಟಿ ರೂ.ಗಳಲ್ಲಿ ಪ್ರತಿ ಸದಸ್ಯರಿಗೂ ಎರಡೆರಡು ಲಕ್ಷ ರೂ.ಗಳನ್ನು ಹಂಚಿ, ಉಳಿದ ಹಣವನ್ನು ಅಧ್ಯಕ್ಷರು ಇಟ್ಟುಕೊಳ್ಳಬಹುದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಈಗಾಗಲೇ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಕ್ಷೇತ್ರದಲ್ಲಿ ಕುಡಿಯುವ ನೀರಿನ ಮಲ್ಟಿ ವಿಲೇಜ್ ಸ್ಕೀಂನಲ್ಲಿ ಯೋಜನೆ ತಂದಿದ್ದಾರೆ. ಇಂತಹ ವೇಳೆ ಈ ಅಧ್ಯಕ್ಷರ ಕ್ಷೇತ್ರಕ್ಕೆ 40 ಲಕ್ಷ ರೂ.ಗಳನ್ನು ನೀಡಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.