ಹಾಸನ: ಬಾಣಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 8 ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಲಕ್ಯ ಗ್ರಾಮದ ನಿವಾಸಿ ಮೆಕ್ಯಾನಿಕ್ ಶ್ರೀಕಾಂತ್ (26) ಹಾಗೂ ಆತನ ಸ್ನೇಹಿತರಾದ ಚೇತನ್ (29) ಮತ್ತು ಲೈಟ್ ಬಾಯ್ ಮೋಹನ್ ಬಂಧಿತರು. ಜನವರಿ 6ರಂದು ಅರೆಕೆರೆ ಗ್ರಾಮದ ಬಳಿ ಬಾಣಾವರ ಜಾವಗಲ್ ಮುಖ್ಯ ರಸ್ತೆಯ ಎಡ ಬದಿಯ ಹಳ್ಳದಲ್ಲಿ ಅಂದಾಜು 30 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರ ಅರೆಬೆಂದ ಕೊಳೆತ ಶವ ಪತ್ತೆಯಾಗಿತ್ತು. ಈ ಕುರಿತು ಬಾಣಾವರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿವರ: ಆರೋಪಿ ಶ್ರೀಕಾಂತ್‌ನ ಅಣ್ಣನ ಮಗನ ನಾಮಕರಣದ ಕಾರ್ಯಕ್ರಮವೊಂದಕ್ಕೆ ಹೋಗಿ ಮರಳುತ್ತಿದ್ದಾಗ ಆತನ ಸ್ನೇಹಿತರಾದ ಚೇತನ್ ಮತ್ತು ಮೋಹನ್ ಚಿಕ್ಕಮಗಳೂರು ಲಕ್ಯ ಬಸ್ ನಿಲ್ದಾಣ ಬಳಿ ಕುಡಿದ ಅಮಲಿನಲ್ಲಿ ಭಿಕ್ಷುಕನೊಬ್ಬನ ಬಳಿ ಗಲಾಟೆ ಮಾಡಿಕೊಂಡರು. ಆಗ ಭಿಕ್ಷುಕ ಶ್ರೀಕಾಂತ್‌ನ ಕೈಕಚ್ಚಿ ಓಡಿದ್ದಾನೆ.
ಇದರಿಂದ ಕುಪಿತಗೊಂಡ ಆರೋಪಿಗಳು ಭಿಕ್ಷುಕನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಕೊಲೆಗೈದರು. ನಂತರ ಮಾರುತಿ ಕಾರಿನೊಳಗೆ ಶವ ಹಾಕಿಕೊಂಡು ಬಾಣಾವರದ ಕೆರೆಕೋಡಿ ಹಳ್ಳದ ಸೇತುವೆ ಬಳಿ ಸುಟ್ಟು ಹಾಕಿದ್ದರು. ಎಎಸ್ಪಿ ನಂದಿನಿ ಅವರ ಮೇಲುಸ್ತುವಾರಿ ನೇತೃತ್ವದಲ್ಲಿ ಈ ಪ್ರಕರಣದ ತನಿಖೆಗೆ ತಂಡ ರಚಿಸಲಾಗಿತ್ತು.