ಹಾಸನ: ತಮ್ಮ ರಾಜಕೀಯ ಕಷ್ಟಗಳನ್ನು ನೆನೆದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಜಿಲ್ಲೆಯ ಹೊಳೆನರಸೀಪುರದಲ್ಲಿ ಕಣ್ಣೀರಿಟ್ಟರು.
ಹೊಳೆನರಸೀಪುರದ ತಮ್ಮ ಸ್ವಗ್ರಾಮ ಹರದನಹಳ್ಳಿಯಲ್ಲಿ ದೇಗುಲ ಉದ್ಘಾಟನೆ ಸಮಾರಂಭದ ಬಳಿಕ ಮಾತನಾಡುತ್ತಾ, ಶೃಂಗೇರಿ ಜಗದ್ಗುರುಗಳ ಸಮ್ಮುಖದಲ್ಲಿಯೇ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದ ದೇವೇಗೌಡರು ಒಂದು ಕ್ಷಣ ಗದ್ಗದಿತರಾದರು. ನಾವು ಸಾಕಷ್ಟು ಕಷ್ಟ ಅನುಭವಿಸಿದ್ದೇವೆ. ಎಷ್ಟೇ ಕಷ್ಟ ಬಂದರೂ ಕೂಡ ನಾವು ಶೃಂಗೇರಿ ಗುರುಗಳನ್ನು ಬಿಡಲಿಲ್ಲ. ನಮ್ಮೆಲ್ಲಾ ಕಷ್ಟ ಸುಖಗಳಿಗೆ ಅವರ ಆಶೀರ್ವಾದವೇ ಕಾರಣ. ಅವರು ಹೇಳುವ ಮಾತುಗಳನ್ನು ಶ್ರದ್ಧಾಭಕ್ತಿಯಿಂದ ಸ್ವೀಕಾರ ಮಾಡಿದ್ದೇವೆ ಎಂದರು.
ಈ ಮಾತಗಳನ್ನು ಯಾರನ್ನೂ ಮೆಚ್ಚಿಸುವುದಕ್ಕೆ ಹೇಳುತ್ತಿಲ್ಲ. ನನ್ನ ರಾಜಕೀಯ ಕಷ್ಟಗಳನ್ನು ನೆನೆದಾಗ ನೋವಾಗುತ್ತದೆ ಎಂದು ಅವರು ಭಾವುಕರಾದರು.