ಹಾಸನ: ನಿತ್ಯವೂ ಮಾಜಿ ಸಚಿವ ಹೆಚ್.ಡಿ. ರೇವಣ್ಣನವರ ಜಪ ಮಾಡದಿದ್ದರೆ ಶಾಸಕ ಪ್ರೀತಂ ಜೆ. ಗೌಡರಿಗೆ ಸಮಾಧಾನವಿಲ್ಲ ಎಂದು ಜಿಪಂ ಉಪಾಧ್ಯಕ್ಷ ಹೆಚ್.ಪಿ. ಸ್ವರೂಪ್ ವ್ಯಂಗ್ಯವಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಬಗ್ಗೆ ಶಾಸಕ ಪ್ರೀತಮ್ ಜೆ. ಗೌಡರು ಹಗುರವಾಗಿ ಮಾತನಾಡಿದ್ದಾರೆ. ಪ್ರೀತಮ್ ಗೌಡರಿಗೆ ಬೆಳಗ್ಗೆ ಎದ್ದೊಡನೆ ರೇವಣ್ಣನವರ ಹೆಸರು ಹೇಳಿಕೊಂಡು ಜಪ ಮಾಡದಿದ್ದರೆ ಸಮಾಧಾನವಾಗುವುದಿಲ್ಲ ಎಂದು ವ್ಯಂಗ್ಯವಾಡಿದ ಅವರು, ಪ್ರತಿ ದಿನ ರೇವಣ್ಣನವರ ಬಗ್ಗೆ ಹಗುರವಾಗಿ ಮಾತನಾಡಿದರೆ ಹೈಕಮಾಂಡ್ನಲ್ಲಿ ಮತ್ತು ಜನರ ಮುಂದೆ ದೊಡ್ಡ ವ್ಯಕ್ತಿ ಆಗಬಹುದು ಅಂದುಕೊಂಡಿದ್ದರೆ ಅದು ತಪ್ಪು ಭಾವನೆ. ಇಡೀ ಕರ್ನಾಟಕದಲ್ಲಿ ಭ್ರಷ್ಟ ಶಾಸಕರು ಎಂದರೆ ಅದು ಹಾಸನದ ಶಾಸಕರು ಎಂದು ಸಾರ್ವಜನಿಕ ವಲಯದಲ್ಲಿ ಮಾತನಾಡುತ್ತಿದ್ದಾರೆ ಎಂದರು.
ಚುನಾವಣೆಗೆ ಮೊದಲು ಶಾಸಕರು ಆಟೋ ಟಿಪ್ಪರ್ ಬಿಟ್ಟು ಕಸ ವಿಲೇವಾರಿ ಮಾಡುತ್ತಿದ್ದರು. ಆದರೆ, ಈಗ ಕಸದ ರಾಶಿ ರಾಶಿಯನ್ನು ನಗರಗಳಲ್ಲಿ ಕಾಣುತ್ತಿದ್ದೇವೆ ಎಂದ ಅವರು, ಜೆಡಿಎಸ್ ನಾಯಕರ ವಿರುದ್ಧ ಇಲ್ಲಸಲ್ಲದ ಹೇಳಿಕೆಯನ್ನು ಬಿಟ್ಟು ಅಭಿವೃದ್ಧಿಯ ಬಗ್ಗೆ ಕೆಲಸ ಮಾಡಲು ಮುಂದಾಗಲಿ ಎಂದು ಸಲಹೆ ನೀಡಿದರು.
165 ಕೋಟಿ ರೂ. ಹಣ ತಂದಿರುವುದಾಗಿ ಶಾಸಕ ಪ್ರೀತಂ ಜೆ. ಗೌಡರು ಹೇಳಿದ್ದು, ನಮ್ಮ ತಂದೆ ಶಾಸಕರಾದಾಗಲೂ ಕೂಡ ಹಲವಾರು ಕಾಮಗಾರಿಗಳನ್ನು ಅನುಷ್ಠಾನಕ್ಕೆ ತಂದಿರುವುದಾಗಿ ಹಿಂದಿನ ಅಭಿವೃದ್ಧಿ ಕೆಲಸವನ್ನು ಮೆಲಕು ಹಾಕಿದರು.
ನಗರಸಭೆಯಲ್ಲಿ ಜೆಡಿಎಸ್ ಸದಸ್ಯರ ಸಂಖ್ಯಾ ಬಲ ಹೆಚ್ಚು ಇದ್ದರೂ, ವಾಮ ಮಾರ್ಗದಿಂದ ಕ್ಯಾಟಗರಿ ಬದಲಾಯಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಸ್ಥಾಯಿ ಸಮಿತಿ ಬಿಟ್ಟರೇ ಯಾವ ಕಾರಣಕ್ಕೂ ಅಧ್ಯಕ್ಷರ-ಉಪಾಧ್ಯಕ್ಷರ ಸ್ಥಾನ ಬಿಜೆಪಿ ತೆಕ್ಕೆಗೆ ಹೋಗಲು ಆಗುವುದಿಲ್ಲ. ಜಿಲ್ಲಾ ಪಂಚಾಯತ್‌ನಲ್ಲೂ ಇದೇ ಪ್ರಯೋಗ ಮಾಡಲು ಹೋಗಿ ಸಾಧ್ಯವಾಗಲಿಲ್ಲ ಎಂದರು.
ನಗರಸಭೆಯನ್ನು ನಗರಪಾಲಿಕೆ ಮಾಡಲು 25 ಹಳ್ಳಿಗಳನ್ನು ಸೇರಿಸಿದ್ದಾರೆ. ನಗರ ಪಾಲಿಕೆ ಮಾಡಲು ಮಾಜಿ ಸಚಿವ ಹೆಚ್.ಡಿ. ರೇವಣ್ಣನವರು ಇದ್ದಾಗಲೂ ಕೂಡ ಮುಂದಾಗಿದ್ದರು. ಬಿಜೆಪಿ ಪಕ್ಷದವರು ಸೊಸೈಟಿ, ಸಹಕಾರ ಬ್ಯಾಂಕ್ ಸೋಲಿನಿಂದ ಶಾಸಕರು ಹತಾಶೆ ಮತ್ತು ಭಯದಿಂದ 25 ಹಳ್ಳಿಗಳನ್ನು ಸೇರಿಸಿ ಮುಂದಿನ ಚುನಾವಣೆಯನ್ನು ಮುಂದಕ್ಕೆ ತಳ್ಳಬಹುದೇ ಹೊರತು ಅಭಿವೃದ್ಧಿ ಮಾಡುವ ಮನಸ್ಸಿರುವುದಿಲ್ಲ ಎಂದರು.