ಹಾಸನ: ದಿನದಿಂದ ದಿನಕ್ಕೆ ಕೋವಿಡ್-19 ಎರಡನೇ ಅಲೆ ಹಾಸನದಲ್ಲಿ ತನ್ನ ಅಟ್ಟಹಾಸವನ್ನು ಮುಂದುವರಿಸುತ್ತಿದೆ. ಕೊರೊನಾ ನಿಗ್ರಹಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ವಾರದಲ್ಲಿ ನಾಲ್ಕು ದಿನ ಲಾಕ್‍ಡೌನ್ ಮಾಡುವಂತೆ ಇಂದು ಜಿಲ್ಲಾಡಳಿತಕ್ಕೆ ಆದೇಶ ನೀಡಿದ್ದಾರೆ.
ಓದಿ: ಹಾಸನ ಜಿಲ್ಲೆ; ವಾರದಲ್ಲಿ ನಾಲ್ಕು ದಿನ ಲಾಕ್‍ಡೌನ್
ಇಂದು ಹಾಸನದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಾತನಾಡಿದ ಅವರು, ಪ್ರತಿದಿನ ಕೋವಿಡ್-19 ಸಾವಿರ ಗಡಿ ದಾಟುತ್ತಿದ್ದು, ಈ ನಿಟ್ಟಿನಲ್ಲಿ ವಾರದಲ್ಲಿ ಸೋಮವಾರ, ಬುಧವಾರ, ಶುಕ್ರವಾರ ಮೂರು ದಿನ ಮಾತ್ರ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳನ್ನು ಕೊಳ್ಳಲು ಅವಕಾಶ ನೀಡಬೇಕು. ಇನ್ನುಳಿದಂತೆ ಶನಿವಾರ, ಭಾನುವಾರ, ಮಂಗಳವಾರ ಹಾಗೂ ಗುರುವಾರ ಸಂಪೂರ್ಣ ಲಾಕ್‍ಡೌನ್ ಮಾಡಲು ಆದೇಶ ನೀಡಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಇಂದಿನಿಂದ ಸೋಂಕಿತರ ಕೈಗೆ ಸೀಲು ಹಾಕುವ ಪ್ರಕ್ರಿಯೆಗೂ ಜಿಲ್ಲಾಧಿಕಾರಿ ಆದೇಶ ನೀಡಿದ್ದು, ಹೋಂ ಐಸೋಲೇಶನ್ನಲ್ಲಿರುವ ಕೆಲವು ಪ್ರಾಥಮಿಕ ವ್ಯಕ್ತಿಗಳನ್ನು ಸಿಸಿಸಿಗೆ ವರ್ಗಾವಣೆ ಮಾಡಲು ಇಂದಿನಿಂದ ಆದೇಶ ಮಾಡಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಕೊರೊನಾ ತಡೆಗಟ್ಟಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹಳೆಯ ಯೋಜನೆಗಳನ್ನು ಮತ್ತೆ ಪುನರಾವರ್ತನೆ ಮಾಡುತ್ತಿದ್ದಾರೆ.
ಕಳೆದ ಬಾರಿಯೂ ಜಿಲ್ಲಾಡಳಿತ ಹಾಗೂ ಶಾಸಕರ ಸಭೆಯಲ್ಲಿ ವಾರದಲ್ಲಿ ನಾಲ್ಕು ದಿನ ಲಾಕ್‍ಡೌನ್ ಮಾಡುವಂತೆ ಸಲಹೆ-ಸೂಚನೆಗಳನ್ನು ಪಡೆದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ಆದೇಶ ಹೊರಡಿಸಿದ್ದರು. ಆದರೆ ಕೇವಲ ಎರಡು-ಮೂರು ಗಂಟೆಗಳಲ್ಲಿ ಆ ಆದೇಶವನ್ನ ಹಿಂಪಡೆಯಲಾಗಿತ್ತು. ಈಗ ಮತ್ತೆ ವಾರದಲ್ಲಿ ನಾಲ್ಕು ದಿನ ಲಾಕ್‍ಡೌನ್ ಮಾಡಿರುವ ಆದೇಶವನ್ನು ವಾಪಸ್ ಬೆಂಗಳೂರಿಗೆ ಹೋಗುವ ಒಳಗೆ ಹಿಂಪಡೆಯುತ್ತಾರೆಯೇ..? ಕಾದು ನೋಡಬೇಕಿದೆ.