ಹಾಸನ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ನಡುವೆ ಮಾರಾಮಾರಿ ನಡೆದು ಫಾರ್ಚುನರ್ ಕಾರನ್ನು ಸುಟ್ಟು ಹಾಕಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಡೆದಿದೆ.
ಬೆಂಗಳೂರಿನಿಂದ ಹಾಸನ ಕಡೆಗೆ ಹೊರಟಿದ್ದ ಪ್ರವಾಸಿಗರು ಊಟ ಮಾಡಲೆಂದು ರಾಷ್ಟ್ರೀಯ ಹೆದ್ದಾರಿಯ 75ರ ಮಟ್ಟನವಿಲೆ ಗ್ರಾಮದ ಬಳಿ ವಾಹನ ನಿಲ್ಲಿಸಿದ್ದರು. ಊಟದ ವಿಚಾರವಾಗಿ ಬೆಂಗಳೂರಿನ ಜಗದೀಶ್ ಮತ್ತು ಮಟ್ಟನವಿಲೆ ದಿಲೀಪ್ ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ವೇಳೆ ಏಕಾಏಕಿ ಕಾರಿನಲ್ಲಿದ್ದ ಜಗದೀಶ್ ಸಹಚರ ದಿಲೀಪ್ ಮತ್ತು ಇತರರ ಮೇಲೆ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ದಿಲೀಪ್ ಮತ್ತು ಆತನ ಸಹಚರರು ಕುಪಿತಗೊಂಡು ಕಾರಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಇನ್ನು ಈ ಸಂಬಂಧ ಅಗ್ನಿಶಾಮಕದಳ ಸ್ಥಳಕ್ಕೆ ಬಂದು ಬೆಂಕಿ ನಂದಿಸುವುದರೊಳಗೆ ಫಾರ್ಚೂನರ್ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಇನ್ನು ಈ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾತುಕತೆ ನಡೆದು ಪ್ರಕರಣ ದಾಖಲಿಸಿ ಸಂಧಾನ ಕಾರ್ಯ ಮಾಡಲು ಮುಂದಾಗಿದ್ದು, ವಿಫಲವಾದ ಹಿನ್ನೆಲೆಯಲ್ಲಿ ಕಾರಿನ ಮಾಲೀಕ ಜಗದೀಶ್ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ದಿಲೀಪ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.