ಹಾಸನ: ಉತ್ತರಾಖಂಡ್ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ವಿರುದ್ಧ 'ಕುದುರೆ ವ್ಯಾಪಾರ'ದಲ್ಲಿ ತೊಡಗಲು ಪ್ರಯತ್ನಿಸಿದ ಆರೋಪದ ಮೇಲೆ ಸಿಬಿಐ ಪ್ರಕರಣ ದಾಖಲಿಸಿದೆ. ಹಾಗೆಯೇ ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಮೇಲೆಯೂ ಕ್ರಮ ಕೈಗೊಳ್ಳಬೇಕಲ್ಲವೇ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಪ್ರಶ್ನಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರವೇ ಈ ರೀತಿ ಉತ್ತರಾಖಂಡ್ ಮಾಜಿ ಸಿಎಂ ವಿರುದ್ಧ ಕ್ರಮ ಜರುಗಿಸಿದೆ. ಹಾಗೆಯೇ ರಾಜ್ಯದಲ್ಲೂ ಮುಖ್ಯಮಂತ್ರಿ ಬಿಎಸ್‌ವೈ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಲ್ಲ. ಒಬ್ಬೊಬ್ಬರಿಗೆ ಒಂದೊಂದು ನ್ಯಾಯವೇ ಎಂದು ಪ್ರಶ್ನಿಸಿದರು. ಅಲ್ಲದೆ, ಮುಂದೆ ಏನೆಲ್ಲಾ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನ ಕಾದು ನೋಡೋಣ ಎಂದರು.
ಇನ್ನು, ರಾಜ್ಯದಲ್ಲಿನ ಸರ್ಕಾರ ರಚನೆಯಾಗಿರುವುದೇ ಕೆಟ್ಟ ನಡವಳಿಕೆಯಿಂದ, ಬಿಜೆಪಿ ನಡೆಯು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಅಡಿಯೋ ವಿರುದ್ಧ ಕಾಂಗ್ರೆಸ್ನವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ರಾಷ್ಟ್ರಪತಿ ಅವರಿಗೂ ದೂರು ನೀಡುವುದಾಗಿ ಹೇಳಿದ್ದಾರೆ ಎಂದರು.
ಆರ್ಸಿಇಪಿ ಒಪ್ಪಂದ ವಿಚಾರದ ಬಗ್ಗೆ ಪ್ರಧಾನಿಗೆ ಸುದೀರ್ಘ ಪತ್ರ ಬರೆದಿದ್ದೇನೆ. ಸಿದ್ದರಾಮಯ್ಯ ಅವರೂ ಮಾತನಾಡಿದ್ದಾರೆ. ಅದರ ಬಗ್ಗೆ ನಾನು ನಾಳೆ ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಮಾಡಿ ಎಲ್ಲಾ ವಿಚಾರಗಳ ಕುರಿತು ಮಾತನಾಡುವುದಾಗಿ ತಿಳಿಸಿದ್ರು.