ಹಾಸನ: ಕೊರೊನಾ ಲಸಿಕೆ ಹಾಕುವುದರಲ್ಲೂ ಸ್ಥಳೀಯ ಶಾಸಕ ಫ್ಲೆಕ್ಸ್ ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಪರೋಕ್ಷವಾಗಿ ಶಾಸಕ ಪ್ರೀತಂ ಜೆ. ಗೌಡ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಕೊರೊನಾ ಲಸಿಕೆ ನೀಡುವ ವಿಚಾರದಲ್ಲೂ ಪಾಲಿಟಿಕ್ಸ್ ಮಾಡುತ್ತಿದ್ದು, ಇದು ಶೋಭೆ ತರುವುದಿಲ್ಲ. ಲಸಿಕೆ ಹಾಕುವುದಕ್ಕೆ ನನ್ನದೇನೂ ಅಭ್ಯಂತರವಿಲ್ಲ. ಆದ್ರೆ ಲಸಿಕೆ ಹಾಕುವುದನ್ನು ದೊಡ್ಡ ದೊಡ್ಡ ಫ್ಲೆಕ್ಸ್, ಲಸಿಕೆ ನೀಡುವ ಕಾರ್ಡ್‌ನಲ್ಲಿ ಯಾರೋ ಒಬ್ಬರ ಫೋಟೋ ಹಾಕಿಕೊಂಡು ರಾಜಕೀಯ ಮಾಡುವುದೆಷ್ಟು ಸರಿ? ಎಂದು ಕಿಡಿಕಾರಿದರು.
ಸರ್ಕಾರದ ನಿಯಮಾವಳಿ ಪ್ರಕಾರ ಎಲ್ಲರ ಫೋಟೋ ಹಾಕಲಿ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮನೆ ದುಡ್ಡಿನಿಂದ ಯಾವ ಲಸಿಕೆಯನ್ನೂ ಕೊಡುತ್ತಿಲ್ಲ. ಜನರ ತೆರಿಗೆ ದುಡ್ಡಿನಲ್ಲಿ ವ್ಯಾಕ್ಸಿನ್ ಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೊದಲು ಲಸಿಕೆ ಕೊಟ್ಟು ನಮ್ಮ ಜನರ ಜೀವ ಉಳಿಸಿ. ಇದರಲ್ಲಿಯೂ ಏನಾದರೂ ರಾಜಕೀಯ ಬೆರೆಸಿದರೆ ನಾವು ಏನ್ ಮಾಡಬೇಕು ಎಂದು ತೋರಿಸಬೇಕಾಗುತ್ತೆ. ರಾಜಕೀಯ ಮಾಡೋದಾದ್ರೆ ನಾವೂ ರಾಜಕೀಯ ಮಾಡುತ್ತೇವೆ. ನಾನು 30 ವರ್ಷದಿಂದ ರಾಜಕೀಯ ಮಾಡಿದ್ದೇನೆ. ಆದರೆ ಇಂತಹ ಕೆಟ್ಟ ರಾಜಕೀಯ ನೋಡಿಲ್ಲ. ಇದಕ್ಕೆಲ್ಲಾ ಕಡಿವಾಣ ಹಾಕದೇ ಹೋದ್ರೆ ಹೋರಾಟ ಮಾಡಬೇಕಾಗುತ್ತದೆ. ಇದಕ್ಕೆ ಜಿಲ್ಲಾಧಿಕಾರಿ, ನಗರಸಭೆ ಆಯುಕ್ತರು ಉತ್ತರ ಕೊಡಬೇಕು. ಬಿಜೆಪಿಯೇ ಶಾಶ್ವತವಾಗಿ ಅಧಿಕಾರವಿರುತ್ತದೆಂದು ಅಧಿಕಾರಿಗಳು ತಿಳಿದುಕೊಂಡಿದ್ದಾರೆ, ಅದು ನಿಮ್ಮ ಭ್ರಮೆ ಎಂದರು.
ರಾಜ್ಯದಲ್ಲಿ ಏನೇ ನಡೆದರೂ ಸಿದ್ದರಾಮಯ್ಯ ಒಬ್ಬರೇ ಕೂಗಾಡುವ ಪರಿಸ್ಥಿತಿ ಬಂದಿದೆ. ಕಾಂಗ್ರೆಸ್ ಪಕ್ಷದ ಉಳಿದವರು ಏಕೆ ಮಾತನಾಡುತ್ತಿಲ್ಲ. ರಾಜ್ಯದಲ್ಲಿ, ರಾಜಕೀಯವಾಗಿ ದೇವರು ಶಕ್ತಿ ಕೊಟ್ಟಾಗ ನಾನು ಕೆಲಸ ಮಾಡುತ್ತೇನೆ. ಈ ರೀತಿ ದ್ವೇಷದ ರಾಜಕಾರಣ ಮಾಡಿದರೆ ಒಂದಲ್ಲೊಂದು ದಿನ ದೇವರೇ ಶಿಕ್ಷೆ ಕೊಡೋ ಕಾಲ ಬಂದೆ ಬರುತ್ತದೆ. ಮೋದಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದರು, ಈಗ ಉಸಿರೇ ಬಿಡುತ್ತಿಲ್ಲ. ಕೊರೊನಾದಿಂದ ಸಾವನ್ನಪ್ಪಿದವರ ಲೆಕ್ಕಾಚಾರವನ್ನು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮುಚ್ಚಿಡುತ್ತದೆ. ಸರಿಯಾಗಿ ಆರ್.ಟಿ-ಪಿ.ಸಿ.ಆರ್ ಪರೀಕ್ಷೆ ಮಾಡುತ್ತಿಲ್ಲ. ಕಡಿಮೆ ಸಂಖ್ಯೆಯಲ್ಲಿ ಕೊವಿಡ್ ಟೆಸ್ಟ್ ಮಾಡಲಾಗುತ್ತಿದ್ದು, ಕೋವಿಡ್ ಹೆಸರಲ್ಲಿ, ಸರ್ಕಾರ ನೂರಾರು ಕೋಟಿಗಳನ್ನು ಲೂಟಿ ಹೊಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಇನ್ನೊಂದು ವಾರದೊಳಗೆ ದಾಖಲೆಸಮೇತ ಸಾಕ್ಷಿ ಬಿಡುಗಡೆ ಮಾಡುತ್ತೇನೆ. ನೀರಾವರಿ ಇಲಾಖೆಯಲ್ಲಿ ದೊಡ್ಡ ಭ್ರಷ್ಟಾಚಾರ ನಡೆಯುತ್ತಿದ್ದು, ಎ1 ಆಗಿ ಯಡಿಯೂರಪ್ಪನವರ ಮೇಲೆ ಕೇಸು ದಾಖಲಿಸುತ್ತೇನೆ. ಮುಖ್ಯಮಂತ್ರಿಗಳೆ ಹಣಕಾಸು ಮಂತ್ರಿಯಾಗಿದ್ದು, ಅಧಿಕಾರಿಗಳನ್ನೊಳಗೊಂಡಂತೆ ಪ್ರಕರಣ ದಾಖಲಿಸುವುದಾಗಿಯೂ ರೇವಣ್ಣ ಎಚ್ಚರಿಸಿದರು.