ಹಾಸನ: ಆಸ್ತಿ ವಿಚಾರದ ಹಿನ್ನೆಲೆಯಲ್ಲಿ ಹೆತ್ತ ತಂದೆಯೇ ಸುಪಾರಿ ಕೊಟ್ಟು ಮಗನನ್ನು ಕೊಲೆ ಮಾಡಿಸಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.
ಹೇಮಂತ್ (49) ಮಗನನ್ನೇ ಕೊಲೆ ಮಾಡಿಸಿದ ಪಾಪಿ ತಂದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಹಿಂದೆ ಎರಡು ಬಾರಿ ಗಲಾಟೆ ನಡೆದು ಗಂಡ ಹೆಂಡತಿ ದೂರವಾಗಿದ್ದರು. ತಂದೆಯ ಜೊತೆಯಲ್ಲಿ ಮಗ ಪ್ರವೀಣ್ ಮತ್ತು ತಾಯಿಯ ಜೊತೆಯಲ್ಲಿ ಹಿರಿಯ ಮಗ ಕೊಲೆಯಾದ ಪುನೀತ್ ವಾಸವಾಗಿದ್ದರು.
ಈ ಹಿಂದೆ ಅಪ್ಪ ಅಮ್ಮ ಮಗನಿಗೆ ಗಲಾಟೆ ಆಗಿ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಕೊಲೆಯಾದ ಪುನೀತ್ ಅಮ್ಮನಿಗೆ ಮತ್ತು ನನಗೆ ಬರಬೇಕಾದ ಆಸ್ತಿಯನ್ನು ಕೊಡಬೇಕೆಂದು ಮೂರ್ನಾಲ್ಕು ಬಾರಿ ತಂದೆಯನ್ನು ಒತ್ತಾಯಿಸಿದ್ದ. ಆದರೆ ಆಸ್ತಿ ಕೊಡಲು ತಂದೆ ಹೇಮಂತ್ ನಿರಾಕರಿಸಿದ್ದ. ಈ ವಿಷಯದಲ್ಲೇ ಪುನೀತ್ ಅನೇಕ ಬಾರಿ ಜಗಳವಾಡಿದ್ದ.
ಹೆತ್ತ ತಂದೆಯ ವಿರುದ್ಧ ಜಗಳವಾಡುತ್ತಿದ್ದ ಪುನೀತ್ ಮೇಲೆ ಹೇಮಂತ್ ದಾಳಿ ನಡೆಸಿದ್ದ. ಬಳಿಕ ಗ್ರಾಮಸ್ಥರು ನ್ಯಾಯ ಪಂಚಾಯಿತಿ ಮಾಡಿ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದರು. ಆದರೆ ಆಸ್ತಿ ವಿವಾದದಲ್ಲಿ ಪದೇ ಪದೇ ತಂದೆ ಮತ್ತು ಮಗನ ನಡುವೆ ಕಲಹ ನಡೆಯುತ್ತಲೇ ಇತ್ತು. ಹೀಗಾಗಿ ಮಗನನ್ನು ಕೊಲೆ ಮಾಡಿದರೆ ಸಮಸ್ಯೆ ಬಗೆಹರಿಯಬಹುದು ಎಂಬ ಆಲೋಚನೆಯಿಂದ ಆರೋಪಿ ಹೇಮಂತ್ ಮಗನನ್ನು ಕೊಲೆ ಮಾಡಲು ಸುಪಾರಿ ನೀಡಿ ನಿನ್ನೆ ರಾತ್ರಿ ಹತ್ಯೆ ಮಾಡಿಸಿದ್ದಾನೆ.
ಇನ್ನು ಗ್ರಾಮಸ್ಥರು ಕೊಟ್ಟ ಕೆಲವು ಮಾಹಿತಿಯ ಹಿನ್ನೆಲೆಯಲ್ಲಿ ತಂದೆ ಹೇಮಂತ್ ಹಾಗೂ ಮಗ ಪ್ರವೀಣ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.