ಹಾಸನ: ರೈತರು ಕೃಷಿಯೊಂದಿಗೆ ಹೈನುಗಾರಿಕೆ ಅಳವಡಿಸಿಕೊಂಡರೆ ಅರ್ಥಿಕವಾಗಿ ಮುಂದೆ ಬರುವುದರ ಜೊತೆಗೆ ಸ್ವಾವಲಂಬಿಗಳಾಗಿ ಬದುಕು ನಡೆಸಲು ಸಾಧ್ಯವೆಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿ ಕೋಡಿಬೆಳಗೊಳ, ಹಿರಿಸಾವೆ ಹೋಬಳಿಯ ಹೆಗ್ಗಡಿಹಳ್ಳಿ ಮತ್ತು ಕೊತ್ತನಹಳ್ಳಿ ಗ್ರಾಮಗಳಲ್ಲಿ ನೂತನವಾಗಿ ಆರಂಭಿಸಲಾಗಿರುವ ಹಾಲು ಉತ್ಪಾದಕರ ಸಂಘಗಳನ್ನು ಉದ್ಘಾಟಿಸಿ ಮಾತನಾಡಿದರು. ತಾಲೂಕಿನಲ್ಲಿ ಹಿಂದೆ ಕೇವಲ 35 ಹಾಲು ಉತ್ಪಾದಕ ಸಂಘಗಳಿದ್ದು, ಸದ್ಯ 306 ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಇದರ ಯಶ್ವಸಿಗೆ ಜಿಲ್ಲೆಯ ಅಭಿವೃದ್ಧಿ ಹರಿಕಾರ ಹೆಚ್.ಡಿ.ರೇವಣ್ಣನವರು ಕಾರಣಿಕರ್ತರೆಂದರು.
ಇನ್ನೂ ಹಾಸನ ಹಾಲು ಒಕ್ಕೂಟಕ್ಕೆ ಹಾಸನ, ಚಿಕ್ಕಮಗಳೂರು, ಕೊಡುಗು ಸೇರಿ 18 ತಾಲೂಕುಗಳಿಂದ 9ಲಕ್ಷ ಲೀಟರ್ ಹಾಲು ಶೇಖರಣೆಯಾದರೇ, ಚನ್ನರಾಯಪಟ್ಟಣ ತಾಲೂಕೊಂದರಲ್ಲೆ 1.90 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುವ ಮೂಲಕ ತಿಂಗಳಿಗೆ 16 ಕೋಟಿ ಹಣ ರೈತರ ಕೈಸೇರುತ್ತಿದೆಯೆಂದು ತಿಳಿಸಿದರು.
ಈ ವೇಳೆ, ತಾ.ಪ ಸದಸ್ಯ ಗಂಗಾಧರ್, ಮಾಜಿ ಸದಸ್ಯ ಗಣೇಶ್, ರಾಮಕೃಷ್ಣ ಮಾಜಿ ಗ್ರಾ.ಪ ಅಧ್ಯಕ್ಷರಾದ ರಮೇಶ್, ಬೋರೆಗೌಡ, ಮುಖಂಡ ನಾಗೇಂದ್ರ ಬಾಬು, ಸೊಸೈಟಿ ಉಪಾಧ್ಯಕ್ಷ ನಾಗಣ್ಣ, ಮಟ್ಟನವಿಲೆ ಸೊಸೈಟಿ ಅಧ್ಯಕ್ಷ ಮಂಜು ಸೇರಿ ಇತರರು ಉಪಸ್ಥಿತರಿದ್ದರು.