ಹಾಸನ /ಅರಕಲಗೂಡು : ಬೆಲೆ ಇಲ್ಲದ ಕಾರಣ ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಸೇವಂತಿಗೆ ಗಿಡಗಳನ್ನು ಹೂ ಸಮೇತ ಟ್ರ್ಯಾಕ್ಟರ್ನಲ್ಲಿ ಉಳುಮೆ ಮಾಡಿ ನಾಶಪಡಿಸಿರೋ ಘಟನೆ ಹಾಸನದಲ್ಲಿ ನಡೆದಿದೆ. ಜಿಲ್ಲೆಯ ಅರಕಲಗೂಡು ತಾಲೂಕಿನ ದುಮ್ಮಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ರೈತ ಚಂದ್ರಶೇಖರ್ ಎಂಬುವರು ಏಳೂವರೆ ಸಾವಿರ ಗಿಡಗಳನ್ನು ನೆಟ್ಟು, ನೀರು ಹಾಯಿಸಿ ಲಕ್ಷಾಂತರ ಹಣ ಖರ್ಚು ಮಾಡಿ ಹೂವು ಬೆಳೆದಿದ್ದರು. ಬೆಳೆದಿದ್ದ ಸೇವಂತಿಗೆ ಹೂ ಬೆಳೆ ಅವರ ಜೇಬು ತುಂಬಿಸುವ ಬದಲು ಆರ್ಥಿಕವಾಗಿ ಸಂಕಷ್ಟಕ್ಕೀಡು ಮಾಡಿದೆ.
ಕಳೆದ ವಾರ ಗೌರಿ ಗಣೇಶ ಹಬ್ಬದ ಸಮಯದಲ್ಲೂ ಸೇವಂತಿ ಹೂವಿಗೆ ಬೆಲೆ ಸಿಗಲಿಲ್ಲ. ಉತ್ತಮ ಲಾಭ ಗಳಿಸುವ ಆಸೆಯಿಂದ ಅಪಾರ ಶ್ರಮ ವಹಿಸಿ ಬೆಳೆದಿದ್ದ ಬೆಳೆ ನಮ್ಮ ಕುಟುಂಬವನ್ನು ಸಾಲದ ಶೂಲಕ್ಕೆ ತಳ್ಳಿತು ಎಂದು ಹೂ ಬೆಳೆಗಾರರು ಅವಲತ್ತುಕೊಳ್ಳುತ್ತಿದ್ದಾರೆ.
ಈ ಬಗ್ಗೆ ರೈತ ಚಂದ್ರಶೇಖರ್ ಅವರು ಪ್ರತಿಕ್ರಿಯಿಸಿ, ಸರ್ಕಾರ ರೈತರಿಗೆ ಏನೂ ನೆರವು ನೀಡಲಿಲ್ಲ. 100 ರೂ. ಇಲ್ಲ, 50 ರೂ. ಇಲ್ಲ, 5 ರೂ. ಮಾರು ಅಂದರೆ ಕುಯ್ಯುವವರಿಗೆ ಕೂಲಿ ಕೊಡಲು ಆಗುವುದಿಲ್ಲ. ಹೀಗಾಗಿ ರೋಟರ್ ಹೊಡೆಸುತ್ತಿದ್ದೇನೆ. ಇನ್ನು ನಮ್ಮಿಂದ ಏನೂ ಮಾಡಲು ಆಗಲ್ಲ. ಸರ್ಕಾರ ಏನಾದ್ರು ನಮ್ಮತ್ರ ಗಮನ ಹರಿಸಿ ಅಲ್ಪಸ್ವಲ್ಪ ನೆರವು ನೀಡಿದರೆ ರೈತರು ಹೇಗಾದ್ರು ಬದುಕಬಹುದು. ಈಗ ಹೂವಿಗೆ ಬರಿ 5 ರೂ. ಮಾರು ಇದೆ. ಕುಯ್ಯುವವರಿಗೆ ದಿನಕ್ಕೆ 400 ರೂ. ಕೂಲಿ ಕೊಡಬೇಕು. ಕಟ್ಟುವುದಕ್ಕೆ ಒಂದು ಮಾಲೆಗೆ 100 ರೂ. ಕೊಡಬೇಕು. ಹೀಗಾಗಿ ಟ್ರ್ಯಾಕ್ಟರ್ ರೋಟರ್ ಹೊಡೆಸುತ್ತಿದ್ದೇನೆ. ಹೊಲದಲ್ಲಿ 7,500 ಗಿಡಗಳನ್ನು ಹಾಕಿದ್ದೆ. 7 ರೂ. ಇಲ್ಲದಂತಾಗಿದೆ. ಹಾಗಾಗಿ ನಾನು ಕಷ್ಟಪಟ್ಟು ಬೆಳೆದಿದ್ದ ಸೇವಂತಿಗೆಯನ್ನು ನಾಶ ಪಡಿಸುತ್ತಿದ್ದೇನೆ ಎಂದು ತಮ್ಮ ಸಂಕಷ್ಟ ತೋಡಿಕೊಂಡರು.
ಒಟ್ಟಾರೆ ತಾಲೂಕಿನ ಕಸಬಾ, ಕೊಣನೂರು, ರಾಮನಾಥಪುರ, ಕೇರಳಾಪುರ ಭಾಗದಲ್ಲಿ ಅಪಾರ ಬೆಳೆಗಾರರು ಬದುಕಿಗಾಗಿ ಹೂ ಬೆಳೆಯನ್ನೇ ನೆಚ್ಚಿಕೊಂಡಿದ್ದಾರೆ. ಪ್ರತಿನಿತ್ಯ ಪಟ್ಟಣ ಪ್ರದೇಶಗಳಿಗೆ ತೆರಳಿ ಹೂ ಮಾರಾಟ ಮಾಡಿ, ಜೀವನ ಸಾಗಿಸುತ್ತಿದ್ದಾರೆ. ಆದರೆ ಇದೀಗ ಹೂವಿಗೆ ಬೆಲೆಯಿಲ್ಲದೆ ಪರಿತಪಿಸುವಂತಾಗಿದೆ ಎನ್ನುತ್ತಾರೆ ಬೆಳೆಗಾರರು.