ಹಾಸನ: ಕೋವಿಡ್-19 ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಎಡವಿದ್ದು ನ್ಯಾಯಾಂಗ ಮತ್ತು ಪತ್ರಿಕಾರಂಗ ಚಾಟಿ ಬೀಸುವ ತನಕ ಎಚ್ಚೆತ್ತುಕೊಳ್ಳಲಿಲ್ಲ ಅಂತ ಮಾಜಿ ಸಚಿವ ಹೆಚ್ ಡಿ ರೇವಣ್ಣ ಡಬಲ್ ಎಂಜಿನ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಹಾಸನ ಜಿಲ್ಲೆಯ ವಿವಿಧ ಶಾಸಕರನ್ನು ಒಳಗೊಂಡಂತೆ ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಭಿವೃದ್ಧಿ ವಿಚಾರ ಸದ್ಯಕ್ಕೆ ಬೇಡ ಈ ಸಂದರ್ಭದಲ್ಲಿ ಜಿಲ್ಲೆಯ ಜನ ಜೀವ ಉಳಿಸಿಕೊಳ್ಳಬೇಕಿದೆ. ಆದರೆ, ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದ್ರು.
ಕುಮಾರಸ್ವಾಮಿಯವರು ಜಿಲ್ಲೆಗೆ ಕೊಟ್ಟ ಅಭಿವೃದ್ಧಿ ಕಾಮಗಾರಿಯನ್ನು ಎರಡು ಸರ್ಕಾರಗಳು ತಡೆ ಹಿಡಿದು ಹತ್ತು ವರ್ಷಗಳಾಗಿದೆ. ಎರಡು ರಾಷ್ಟ್ರೀಯ ಪಕ್ಷಗಳು ವರ್ಗಾವಣೆ ದಂಧೆಯಲ್ಲಿ ಮಗ್ನರಾಗಿದ್ದು, ರೈತರ ಮತ್ತು ಅಭಿವೃದ್ಧಿಪರ ಚಿಂತನೆಯನ್ನೇ ಮಾಡಲಿಲ್ಲ. ಮೊದಲ ಅಲೆಯಲ್ಲಿ ಜೆಡಿಎಸ್ ಪಕ್ಷದ ಶಾಸಕರು ತಮ್ಮ ಕೈಲಾದ ಸಹಾಯವನ್ನು ಜನರಿಗಾಗಿ ಮಾಡಿದ್ದಾರೆ. ಆದರೆ, ಉಪಚುನಾವಣೆಗೆ ಸರ್ಕಾರ ಹೋಗದಿದ್ದರೆ ಎರಡನೇ ಅಲೆಯಲ್ಲಿ ಇಷ್ಟು ಸಾವು - ನೋವು ಸಂಭವಿಸುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇತ್ತೀಚಿನ ದಿನದಲ್ಲಿ ಸರ್ಕಾರ ಸಾವಿನ ಸಂಖ್ಯೆಯನ್ನು ಮರೆ ಮಾಚುತ್ತಿದೆ. ನಿತ್ಯ ನಮ್ಮ ಜಿಲ್ಲೆಗೆ 1000 ಸಿಲಿಂಡರ್ ಅವಶ್ಯಕತೆ ಇದ್ದು ಇದನ್ನ ತರಿಸಿಕೊಳ್ಳಲು ನಾವು ನ್ಯಾಯಾಂಗದ ಮೆಟ್ಟಿಲು ಹತ್ತಬೇಕಾದ ಪರಿಸ್ಥಿತಿ ಎದುರಾಯಿತು. ಅಂತಹ ಕೆಟ್ಟ ಪರಿಸ್ಥಿತಿ ರಾಜ್ಯಕ್ಕೆ ಬಂದಿದೆ ಎಂದ್ರು.
ನಿನ್ನೆಯಿಂದ ಜನರಿಗೆ ವಿದ್ಯುತ್ ಬೆಲೆ ಏರಿಕೆ ಮಾಡಲಾಗಿದ್ದು, ಪೆಟ್ರೋಲ್ ನೂರರ ಗಡಿ ದಾಟಿದೆ ಎರಡು ಸರ್ಕಾರಗಳಿಗೆ ಪ್ರತಿಶತ 62 ರೂ ತೆರಿಗೆ ಬರುತ್ತಿದ್ದರೂ ಸಾರ್ವಜನಿಕರಿಗೆ ಸರ್ಕಾರ ಏನು ಕೊಡುತ್ತಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ನನ್ನ ಬಗ್ಗೆ ಆರೋಪ ಕೇಳಿ ಬಂತು. ಆದರೆ, ನಾನು ಯಾವುದೇ ಅಕ್ರಮ ಚಟುವಟಿಕೆಯಲ್ಲಿ ಭಾಗಿ ಆಗಿಲ್ಲ ಅಂತ ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿಗಳ ಮುಂದಿಡಲು ನಿರ್ಧರಿಸಿರುವ ಬೇಡಿಕೆಗಳು :
- ಕೋವಿಡ್ನಿಂದ ನೊಂದವರಿಗೆ ಪರಿಹಾರ ನೀಡಬೇಕು.
- ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಶೇಕಡಾ 50 ರಷ್ಟು ಚಿಕಿತ್ಸಾ ವೆಚ್ಚ ಭರಿಸಬೇಕು.
- ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಹೆಚ್ಚಾಗಿರುವುದರಿಂದ ಲಾಕ್ಡೌನ್ ಮುಂದುವರಿಸಬೇಕು.
- ಅಸಂಘಟಿತ ಕಾರ್ಮಿಕ ವಲಯಕ್ಕೆ ಕನಿಷ್ಠ 10 ಸಾವಿರ ಪ್ಯಾಕೇಜ್ ಘೋಷಣೆ ಮಾಡಬೇಕು.
- ಸರ್ಕಾರದ ಮತ್ತು ಜಿಲ್ಲಾಡಳಿತದ ದ್ವಂದ್ವ ನೀತಿ ಕೈಬಿಟ್ಟು ಪರಿಸ್ಥಿತಿ ಹತೋಟಿಗೆ ತರಲು ಶ್ರಮಿಸಬೇಕು.
- ಮಲೆನಾಡು ಭಾಗದಲ್ಲಿ ಕಾಡಾನೆ ಸಮಸ್ಯೆ ಹೆಚ್ಚಾಗಿದ್ದು ಅದಕ್ಕೆ ಇದುವರೆಗೂ ಸರಿಯಾದ ಪರಿಹಾರ ಒದಗಿಸಿಲ್ಲ
ಈ ಎಲ್ಲ ಅಂಶಗಳನ್ನು ನಾಳೆ ಮುಖ್ಯಮಂತ್ರಿಗಳ ಮುಂದೆ ಪ್ರಸ್ತಾಪ ಮಾಡುತ್ತೇವೆ ಎಂದು ಹೆಚ್ ಡಿ ರೇವಣ್ಣ ಸುದ್ದಿಗೋಷ್ಠಿಯಲ್ಲಿ ಹೇಳಿದರು.