ಹಾಸನ: ಅಮೇಠಿಯಲ್ಲಿ ಸ್ಮೃತಿ ಇರಾನಿ ಪ್ರಾಬಲ್ಯ ಹೆಚ್ಚಿರುವುದರಿಂದ ರಾಹುಲ್ ಗಾಂಧಿ ಕೇರಳದಿಂದ ಸ್ಪರ್ಧಿಸುತ್ತಿದ್ದಾರೆ ಎಂದು ಮಾಜಿ ಸಿಎಂ, ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ, ರಾಹುಲ್ ವಿರುದ್ಧ 1ಲಕ್ಷ ಮತಗಳ ಅಂತರದಿಂದ ಸೋತಿದ್ದರೂ, ಅಮೇಠಿಯನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದ ಅವರ ಪ್ರಾಬಲ್ಯ ಹೆಚ್ಚಿದ್ದು, ರಾಹುಲ್ ಈ ಕಾರಣಕ್ಕಾಗಿ ಕೇರಳದ ಕಡೆ ಮುಖ ಮಾಡಿರಬಹುದು ಎಂದು ಹೇಳಿದರು.
ಪ್ರಜಾಪ್ರತಿನಿಧಿ ಕಾಯ್ದೆಯಂತೆ ಯಾರು ಎಲ್ಲಿಂದ ಬೇಕಾದರೂ, ಎರಡು ಕ್ಷೇತ್ರಗಳಲ್ಲಿಯೂ ಸ್ಪರ್ಧಿಸುವ ಅವಕಾಶವಿದೆ ಎಂದೂ ಹೇಳಿದರು.
ಈ ಬಾರಿಯ ಚುನಾವಣೆಯಲ್ಲಿ ಮೈತ್ರಿ ಸರ್ಕಾರಕ್ಕೆ ಜನತೆ ತಕ್ಕ ಉತ್ತರ ಕೊಡುವರು. ಮಂಡ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗಲೂ ಪಕ್ಷದ ಒಬ್ಬ ಅಭ್ಯರ್ಥಿ ಇಲ್ಲ. ಪ್ರಚಾರಕ್ಕೆ ಹೋಗಬೇಕೊ, ಬೇಡವೋ ಎಂಬುದನ್ನ ಆ ಪಕ್ಷ ತೀರ್ಮಾನಿಸುತ್ತೆ ಎಂದು ಕುಟುಕಿದರು.
ಮೋದಿ ದೇಶದ್ರೋಹಿ ಎಂಬ ಹೇಳಿಕೆಯನ್ನ ನಾನು ಒಪ್ಪಲ್ಲ. ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾನಿಯವರ ವಿಚಾರ ಪ್ರಸ್ತಾಪಿಸುವುದು ಇಲ್ಲಿ ಅನುಚಿತ. ಇದನ್ನೂ ಸಹ ನಾನು ಒಪ್ಪುವುದಿಲ್ಲ ಎಂದು ನುಡಿದರು. ಮೋದಿ ಮತ್ತೊಮ್ಮೆ ಅಧಿಕಾರ ವಹಿಸಿಕೊಳ್ಳುವ ಬಗ್ಗೆ ಸಂಶಯವಿಲ್ಲ. ಉತ್ತರ ಪ್ರದೇಶದಲ್ಲಿ ಎಸ್ಪಿ, ಬಿಎಸ್ಪಿ ಸೇರಿ ಕಾಂಗ್ರೆಸ್ಗೆ ಎರಡು ಸ್ಥಾನ ಮಾತ್ರ ಕೊಟ್ಟಿವೆ. ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಮುಕ್ತ ಘಟಬಂಧನ್ ಇದೆ. ಮೋದಿ ಎಲ್ಲಿ, ಈ ಮಹಾ ಘಟಬಂಧನ್ ಎಲ್ಲಿ? ಮೋದಿ ವ್ಯಕ್ತಿತ್ವ ಹಿರಿದಾದುದು ಎಂದರು.
ಆದಾಯ ತೆರಿಗೆ ಇಲಾಖೆ ಕಾನೂನು ಚೌಕಟ್ಟಿನಲ್ಲೆ ಕೆಲಸ ಮಾಡುತ್ತಿದೆ. ರಾಜಕೀಯ ಹಿನ್ನೆಲೆ ದಾಳಿ ನಡೆಸಲಾಗ್ತಿದೆ ಎಂಬ ಆರೋಪಕ್ಕೆ ಹುರುಳಿಲ್ಲ ಎಂದರು. ಕಾಂಗ್ರೆಸ್ ಮಾಜಿ ಸಚಿವ ಆತ್ಮಾನಂದ ಮನೆ ಮೇಲೆ ಐಟಿ ದಾಳಿ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಧ್ಯಮದಲ್ಲಷ್ಟೇ ನೋಡಿ ತಿಳಿದಿದ್ದೇನೆ ಎಂದರು.