ಹಾಸನ: ಲೋಕಸಭೆ ಚುನಾವಣೆಯಲ್ಲಿ ನಾವು ರಾಜ್ಯದ 22 ಸ್ಥಾನಗಳಲ್ಲಿ ಗೆಲ್ಲುತ್ತೇವೆಂದು ಲಕೋಟಿ ಮೇಲೆ ಬರೆದುಕೊಡುತ್ತೇನೆ. ಹಾಸನ ಕ್ಷೇತ್ರದಲ್ಲೂ ನಮ್ಮ ಗೆಲುವು ನಿಶ್ಚಿತ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಶ್ವಾಸದಿಂದ ಹೇಳಿದರು.
ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಪರ ಅರಸೀಕೆರೆಯಲ್ಲಿ ಅವರು ಪ್ರಚಾರ ಮಾಡಿದರು. ಈ ವೇಳೆ ಮಾತನಾಡಿದ ಅವರು, ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ, ಈ ಬಾರಿ ಮತ್ತೊಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೆ ಬರುವುದೂ ಅಷ್ಟೇ ಸತ್ಯ ಎಂದು ಹೇಳಿದರು.
ನಮ್ಮ ಎದುರಾಳಿಗಳನ್ನು ಹಗುರವಾಗಿ ಕಾಣುವಂತಿಲ್ಲ. ಕೊನೆಯ ದಿನ ಹಣದ ಹೊಳೆಯನ್ನೇ ಹರಿಸಿ ಜನರನ್ನು ಮರುಳು ಮಾಡಿ ಮತ ಹಾಕಿಸಿಕೊಳ್ಳಬಹುದು. ಆಮೇಲೆ ಮತ್ತೈದು ವರ್ಷ ಜನರನ್ನು ಮೋಸಗೊಳಿಸ್ತಾರೆ ಎಂದು ಕುಟುಕಿದರು.
ಇಡೀ ದೇಶ ಮೋದಿ ಮೋದಿ ಅಂತ ಹೇಳುತ್ತಿದೆ. ಬಿಜೆಪಿಗರು ಏಕೆ ಮೋದಿ ಹೆಸರು ಹೇಳುತ್ತಾರೆ ಎಂದು ಕಾಂಗ್ರೆಸಿಗರು ಕೇಳ್ತಾರೆ . ಅವರೇಕೆ 10 ವರ್ಷ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಹೆಸರು ಹೇಳಲ್ಲ? ಸಿಂಗ್, ಸೋನಿಯಾಗಾಂಧಿಯ ಹೆಬ್ಬೆಟ್ಟು ಒತ್ತುವ ಕೆಲಸ ಮಾಡಿದರು ಅಷ್ಟೆ. ನಿಮಗ್ಯಾರಿದ್ದಾರೆ ನಾಯಕರು? ಎಂದು ಛೇಡಿಸಿದರು.
ಜಾತಿ ವಿಷ ಬೀಜ ಬಿತ್ತುವ ಸಂಸ್ಕೃತಿ ನಮ್ಮದಲ್ಲ. ಅದು ಕುಟುಂಬ ರಾಜಕಾರಣದವರಿಗೆ ಮಾತ್ರ ಸಾಧ್ಯ. ನಮ್ಮದು ಜಾತ್ಯತೀತ ಪಕ್ಷ . ಬಿಜೆಪಿ ಸರ್ಕಾರವಿದ್ದಾಗ ಅಬ್ದುಲ್ ಕಲಾಂರನ್ನು ರಾಷ್ಟ್ರಪತಿಗಳನ್ನಾಗಿ ಮಾಡಿರಲಿಲ್ಲವೇ? ಎಂದು ದೇವೆಗೌಡರ ಹೆಸರು ಪ್ರಸ್ತಾಪಿಸದೇ ಗುಡುಗಿದರು.
2 ವರ್ಷದ ಹಿಂದೆಯೇ ತನಗೆ ಪುಲ್ವಾಮಾ ದಾಳಿ ಬಗ್ಗೆ ಗೊತ್ತಿತ್ತು ಎಂದಿದ್ದ ಕುಮಾರಸ್ವಾಮಿ ತಿರುಗೇಟು ನೀಡಿದ ಬಿಎಸ್ವೈ, ಮಾನ,ಮರ್ಯಾದೆ ಇದ್ದಿದ್ದರೆ 40 ಸೈನಿಕರ ಮೃತದೇಹ ಛೀದ್ರವಾಗೋದಕ್ಕೆ ಬಿಡ್ತಿರಲಿಲ್ಲ. ಆ ಮೊದಲೇ ಪ್ರಧಾನಿಗೆ ಈ ವಿಷಯ ತಿಳಿಸುತ್ತಿದ್ದಿರಿ. ಇದು ದೇಶದ್ರೋಹದ ಕೆಲಸ ಎಂದರು. ರಾಜ್ಯದ ಅಭಿವೃದ್ದಿ ಅಂದ್ರೆ ಅದು ದೇವೆಗೌಡ ಅಂಡ್ ಕಂಪನಿ ಅಷ್ಟೆ ಎಂದು ಟೀಕಿಸಿದ್ರು.
ನರೇಂದ್ರ ಮೋದಿ ಈಗಾಗಲೇ ಎಲ್ಲಾ ರೈತರಿಗೂ ವಾರ್ಷಿಕ 6000 ರೂ ನೀಡುವ ಯೋಜನೆ ರೂಪಿಸಿದ್ದಾರೆ. ವಿಧಾನಸಭೆಯಲ್ಲಿ ಶೇಕಡ 33ರಷ್ಟು ಮಹಿಳಾ ಮೀಸಲಾತಿ ನೀಡುವ ಮಹತ್ವದ ನಿರ್ಣಯ ಕೈಗೊಂಡಿದ್ದಾರೆ. 370ನೇ ವಿಧಿ ಕೈಬಿಡಲು ಈಗಾಗಲೇ ಅವರು ಚಿಂತನೆ ನಡೆಸುತ್ತಿದ್ದು, ಕಾಶ್ಮೀರದಲ್ಲಿ ಎಲ್ಲರಿಗೂ ಸಮಾನ ಹಕ್ಕು ನೀಡಲಿದ್ದಾರೆ ಎಂದರು.