ಹಾಸನ: ಜನವರಿ 3ರಂದು ಬೇಲೂರು ತಾಲೂಕಿನಲ್ಲಿ ಕಾಡಾನೆಯೊಂದು ವ್ಯಕ್ತಿಯೊಬ್ಬನನ್ನು ಬಲಿ ತೆಗೆದುಕೊಂಡಿದ್ದ ಘಟನೆ ಮಾಸುವ ಮುನ್ನವೇ ಆಲೂರು ತಾಲೂಕಿನ ಅಬ್ಬನ ಗ್ರಾಮದಲ್ಲಿ ಜೋಡಿ ಆನೆಗಳು ಕಾಣಿಸಿಕೊಂಡಿವೆ.
ಇಂದು ಗ್ರಾಮಕ್ಕೆ ಲಗ್ಗೆಯಿಟ್ಟ ಜೋಡಿ ಆನೆಗಳನ್ನು ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಒಂದು ಪುಂಡಾನೆಯನ್ನು ಪಟಾಕಿಗಳನ್ನು ಸಿಡಿಸಿ ಗ್ರಾಮಸ್ಥರೇ ಕಾಡಿಗಟ್ಟಿದರೆ, ಮತ್ತೊಂದು ಆನೆ ಗ್ರಾಮದ ಒಳಗೆ ಎಂಟ್ರಿ ಕೊಟ್ಟು ಆತಂಕ ಸೃಷ್ಟಿಮಾಡಿದೆ. ಗ್ರಾಮದ ಯುವಕರು ಪ್ರಾಣವನ್ನು ಒತ್ತೆ ಇಟ್ಟು ಆನೆಯನ್ನು ಓಡಿಸಿದ್ದು ನಿಜಕ್ಕೂ ಶ್ಲಾಘನೀಯ. ಆದರೆ ಇಂತಹ ಸಾಹಸ ಒಳ್ಳೆಯದಲ್ಲ ಎಂಬುದು ಅರಣ್ಯಾಧಿಕಾರಿಗಳ ಸಲಹೆ.
ಯುವಕರಿಗೆ ಜಗ್ಗದ ಆನೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕೆಲಹೊತ್ತು ಸುತ್ತಾಡಿದ ನಂತರ ಕಾಫಿ ತೋಟಕ್ಕೆ ಓಡಿಸುವ ಮೂಲಕ ಆನೆಯನ್ನು ತಾತ್ಕಾಲಿಕವಾಗಿ ಬಂಧಿಸಲಾಗಿದೆ. ವಿಷಯ ತಿಳಿದ ಮೇಲೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಆನೆಯನ್ನು ಕಾಡಿನತ್ತ ಓಡಿಸಲು ಪ್ರಯತ್ನಿಸುತ್ತಿದ್ದಾರೆ. ಆನೆಗಳ ಉಪಟಳ ಮತ್ತೆ ಹೆಚ್ಚಾಗತೊಡಗಿದ್ದರಿಂದ ಸರ್ಕಾರ ಕೂಡಲೇ ಮಾನವ-ಪ್ರಾಣಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ದೊರಕಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.