ಹಾಸನ: ಒಂಟಿ ಸಲಗವೊಂದು ವೃದ್ಧ ಮಹಿಳೆಯೊಬ್ಬರ ಮೇಲೆ ಏಕಾಏಕಿ ದಾಳಿ ಮಾಡಿ ಕೊಂದು ಹಾಕಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ. ಕ್ಯಾಮನಹಳ್ಳಿ ಗ್ರಾಮದ ಲಲಿತಾ (65) ಮೃತ ವೃದ್ಧ ಮಹಿಳೆ ಎಂದು ತಿಳಿದು ಬಂದಿದೆ.
ಕಳೆದ ರಾತ್ರಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಅವರ ಅಂತಿಮ ದರ್ಶನ ಪಡೆದು ವಾಪಸ್ ಮನೆಗೆ ಹಿಂದಿರುಗುತ್ತಿದ್ದಾಗ ಕಾಫಿ ತೋಟದಲ್ಲಿದ್ದ ಒಂಟಿ ಸಲಗ ಏಕಾಏಕಿ ದಾಳಿ ನಡೆಸಿದೆ. ಪರಿಣಾಮ ವೃದ್ಧೆ ಸ್ಥಳದಲ್ಲೇ ಅಸುನೀಗಿದ್ದಾರೆ ಎನ್ನಲಾಗುತ್ತಿದೆ.
ಈ ಒಂಟಿ ಸಲಗ ಕಳೆದ ಒಂದು ವರ್ಷದ ಹಿಂದೆ ಹಾನುಬಾಳು ಹೋಬಳಿಯಲ್ಲಿ ಡ್ಯಾನಿ ಎಂಬ ವ್ಯಕ್ತಿಯನ್ನು ತುಳಿದು ಕೊಂದು ಹಾಕಿತ್ತು. ಆ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ದುರಂತ ಸಂಭವಿಸಿರುವುದಕ್ಕೆ ಸ್ಥಳೀಯ ರೈತಾಪಿ ವರ್ಗ ಭಯಭೀತಗೊಂಡಿದೆ.
ಮೂಡಿಗೆರೆ ಹಾಗೂ ಸಕಲೇಶಪುರ ಭಾಗಗಳಲ್ಲಿ ರೈತರು ಬೆಳೆದ ವಾಣಿಜ್ಯ ಬೆಳೆ, ಕಾಫಿ ತೋಟ ಹಾಗೂ ಮಾನವರ ಮೇಲೆ ಕಾಡು ಪ್ರಾಣಿಗಳಿಂದ ಆಗುತ್ತಿರುವ ದಾಳಿಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಯಮಸ್ವರೂಪಿಯಂತೆ ಆಗಮಿಸಿ ಮಾನವರ ಬಲಿ ಪಡೆಯುತ್ತಿರುವ ಕಾಡಾನೆಯನ್ನು ಅರಣ್ಯ ಇಲಾಖೆ ಈ ಕೂಡಲೇ ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.