ಹಾಸನ: ಅರಕಲಗೂಡು ತಾಲೂಕಿನ ಸರಗೂರು ಗ್ರಾಮದ ವ್ಯಕ್ತಿಯೊಬ್ಬನಿಗೆ ನಕಲಿ ಚಿನ್ನ ನೀಡಿ ಬರೋಬ್ಬರಿ 4 ಲಕ್ಷ ರೂ. ವಂಚನೆ ಮಾಡಿರುವ ಘಟನೆ ನಡೆದಿದೆ.
ಸರಗೂರು ಗ್ರಾಮದ ನಾಗರಾಜ್ ಎಂಬುವವರೇ ಮೋಸ ಹೋದ ವ್ಯಕ್ತಿ. ಮನೆಗೆ ಮಸಾಜ್ ಮಾಡೋ ನೆಪದಲ್ಲಿ ಬಂದು ನಂತರ ಪರಿಚಯ ಮಾಡಿಕೊಂಡು ಹೋಗಿದ್ದ ತಂಡ ನಾಗರಾಜ್ ನ ವಿಶ್ವಾಸ ಗಳಿಸಿದ್ದರು. ನಂತರ ನಮಗೆ ಬಾವಿ ತೋಡುವಾಗ ಪುರಾತನ ಕಾಲದ ಚಿನ್ನ ಸಿಕ್ಕಿದೆ. ನಿಮಗೆ ಕಮ್ಮಿ ಬೆಲೆಗೆ ನೀಡುತ್ತೇವೆ ಬನ್ನಿ ಎಂದು ನಂಬಿಸಿ, ಮೊದಲು ಅಸಲಿ ಚಿನ್ನದ ತುಣುಕು ನೀಡಿದೆ. ಎರಡನೇ ಭೇಟಿಯಲ್ಲಿ 4 ಲಕ್ಷ ಪಡೆದು ಅಸಲಿ ಎಂದು ನಂಬಿಸಿ ನಕಲಿ ಚಿನ್ನದ ನಾಣ್ಯ ನೀಡಿ ನಾಪತ್ತೆಯಾಗಿದ್ದರು.
ಆದರೆ, ತಮ್ಮ ಹೀನ ಚಾಳಿ ಬಿಡದ ಈ ತಂಡ ಎರಡನೇ ಬಾರಿ ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಹೊನ್ನಾಪುರ ಗ್ರಾಮದ ಪುನೀತ್ ಎಂಬ ಯುವಕನಿಗೆ ಈ ತಂಡ ಪೋನ್ ಮಾಡಿ ಚಿನ್ನದ ನಾಟಕವಾಡಿದೆ. ಆದ್ರೆ ಅಷ್ಟರಲ್ಲಿ ಪುನೀತ್ಗೆ ಮೊದಲು ಮೋಸ ಹೋದ ನಾಗರಾಜ್ ಪರಿಚಯವಾಗಿದೆ. ಹೀಗಾಗಿ ಈ ಮೋಸದ ಜಾಲ ಭೇದಿಸಲು ಪುನೀತ್ ಹಾಗೂ ಮೋಸ ಹೋದ ನಾಗರಾಜ್ ಹಾಸನ ನಗರ ಠಾಣೆ ಸಿಪಿಐ ರೇಣುಕಾ ಪ್ರಸಾದ್ ಸಹಾಯ ಕೋರಿದಾಗ, ತಮ್ಮ ಠಾಣೆ ಕಾನ್ಸ್ಟೇಬಲ್ ಗಳನ್ನ ಈ ಮೋಸದ ಜಾಲ ಭೇದಿಸಲು ಕಳಸಿಕೊಟ್ಟಿದ್ದರು.
ಓದಿ : ಪ್ರಿಯಕರನ ಜೊತೆ ಸೇರಿ ಪತಿಯ ಕೊಲೆ, ಕುಟುಂಬಸ್ಥರಿಗೆ ಆಕಸ್ಮಿಕ ಮರಣ ಎಂದು ನಂಬಿಸಿದ್ದ ಮಹಿಳೆ ಅರೆಸ್ಟ್
ಇನ್ನು ಎರಡನೇ ಬಾರಿಯೂ ಮೋಸ ಮಾಡಿ ಹಣ ಪೀಕೋ ಐಡಿಯಾದಲ್ಲಿದ್ದ ಕಳ್ಳರ ಗುಂಪು, ಪುನೀತ್ ಅವರನ್ನ ಹಾಸನ ಮತ್ತು ಬೇಲೂರು ರಸ್ತೆಯ ಹಗರೆ ಬಳಿ ಬರುವಂತೆ ಹೇಳಿದ್ದಾರೆ. ಅಷ್ಟರಲ್ಲಿ ಪುನೀತ್ ಜೊತೆ ತೆರಳಿದ್ದ ಹಾಸನ ನಗರ ಪೊಲೀಸರ ತಂಡ ಈ ಖತರ್ನಾಕ್ ಕಳ್ಳರ ಗುಂಪನ್ನು ಬಲೆ ಬೀಸಿ ಮೂವರು ಇದ್ದ ಕಳ್ಳರ ಗುಂಪಿನಲ್ಲಿ ಓರ್ವನನ್ನ ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಈ ವೇಳೆ, ಪೊಲೀಸರ ಮೇಲೂ ಈ ಕಳ್ಳರ ಗುಂಪು ಹಲ್ಲೆಗೆ ಮುಂದಾಗಿದೆ. ಇನ್ನು ಬಂಧಿತ ಹಾಸನದ ಅಂಗಡಿಹಳ್ಳಿ ಮೂಲದ ಜಗದೀಶ್ ಅಂತ ತಿಳಿದು ಬಂದಿದ್ದು, ಘಟನೆಯಲ್ಲಿ ಕಾನ್ಸ್ಟೇಬಲ್ ಜಮೀಲ್ ಎಂಬುವರಿಗೆ ಸಣ್ಣಪುಟ್ಟ ಗಾಯಗಾಳಾಗಿವೆ.