ಹಾಸನ: ಕೊರೊನಾ ಎಂಬ ಮಹಾಮಾರಿ ಕಳೆದ ಎರಡು ವಾರಗಳಿಂದ ನಗರಕ್ಕೂ ಆವರಿಸಿದ್ದು, ಜಿಲ್ಲೆಯಲ್ಲಿ 5 ಕಡೆ ಸೀಲ್ ಡೌನ್ ಮತ್ತು ಹೊಳೆನರಸೀಪುರದಲ್ಲಿ 1 ಕಡೆ ಸೀಲ್ ಡೌನ್ ಮಾಡಲಾಗಿದೆ. ಹಾಗಾಗಿ ಸ್ಥಳಕ್ಕೆ ಜಿಲ್ಲಾಧಿಕಾರಿ ಆರ್.ಗಿರೀಶ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮಂಗಳವಾರ ಮಧ್ಯಾಹ್ನದ ವೇಳೆಗೆ ಬರೋಬ್ಬರಿ 12 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಭಾನುವಾರವಷ್ಟೇ ನಗರದ ಉತ್ತರ ಬಡಾವಣೆ ಮತ್ತು ಬಿ. ಕಾಟೀಹಳ್ಳಿ ಗ್ರಾಪಂ ವ್ಯಾಪ್ತಿಯ ಇಂದಿರಾ ನಗರವನ್ನು ಸೀಲ್ ಡೌನ್ ಮಾಡಲಾಗಿತ್ತು. ನಗರದ ವಿಶ್ವೇಶ್ವರ ಬಡಾವಣೆ, ಇಂದಿರಾ ನಗರದ ಮತ್ತೊಂದು ಕಡೆ, ಗಾಡೆನಹಳ್ಳಿಯ ಪೊಲೀಸ್ ಕೆ.ಎಸ್.ಆರ್.ಪಿ. ಭಾಗದ ಒಂದು ಕಡೆ ಹಾಗೂ ಹೊಳೆನರಸೀಪುರ ಭಾಗದ ಒಂದು ಕಡೆ ಸೇರಿ ಒಟ್ಟು 5 ಕಡೆ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.
ಮಂಗಳವಾರ ಮತ್ತೆ ಮುಂಬೈನಿಂದ ಚನ್ನರಾಯಪಟ್ಟಣ್ಣಕ್ಕೆ ಬಂದಿದ್ದ 13 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇವರೆಲ್ಲಾ ಮುಂಬೈನಿಂದ ನೇರವಾಗಿ ಕ್ವಾರಂಟೈನ್ ಸೆಂಟರ್ಗೆ ತೆರಳಿದ್ದರಿಂದ ಆತಂಕ ಪಡುವ ಅವಶ್ಯಕತೆ ಇಲ್ಲ. ಇದಲ್ಲದೇ ಸಂಜೆ ವೇಳೆಗೆ ಇನ್ನೂ ಹತ್ತು ಜನರಿಗೆ ಸೋಂಕು ಇರಬಹುದು ಎಂಬ ಅನುಮಾನವನ್ನು ಜಿಲ್ಲಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಒಂದೇ ದಿನ ಏಳು ಜನ ಪೊಲೀಸರಿಗೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಇವರಲ್ಲಿ ಪಿಎಸ್ಐ ಕೂಡ ಸೇರಿದ್ದು, ಬೆಳಗಾವಿಯ ನಿಪ್ಪಾಣಿಯಲ್ಲಿ ಕರ್ತವ್ಯ ನಿರ್ವಹಿಸಿದ ನಾಲ್ಕು ಜನ ಪೊಲೀಸರು ಮತ್ತು ಕೆ.ಎಸ್.ಆರ್.ಪಿ. ಕಾನ್ಸ್ಟೇಬಲ್ ಸಂಪರ್ಕದಲ್ಲಿದ್ದ ಮೂರು ಜನ ಪೊಲೀಸರಿಗೆ ಸೋಂಕು ತಗುಲಿದೆ.
28 ದಿನ ಯಾರೂ ಮನೆಯಿಂದ ಹೊರ ಬರುವ ಹಾಗಿಲ್ಲ. ಏನೇ ಬೇಕಾದರೂ ನೀಡಲಾಗಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಆಹಾರ ಪದಾರ್ಥ ತರಿಸಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.