ಹಾಸನ: ಇತ್ತೀಚೆಗೆ ನಗರದ ಬೀರನಹಳ್ಳಿಯ ರಾಘವೇಂದ್ರ ಕಾಲೋನಿಯಲ್ಲಿ ನಡೆದ ದಲಿತ ಮಹಿಳೆಯ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಶಿಕ್ಷೆ ನೀಡುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಪ್ಯಾದೆ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೊಟ್ಟೂರು ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಗೆ ಸೇರಿರುವ ಕೊರಮ, ಕೊರಚ ಜಾತಿಯ ಅಲೆಮಾರಿ ಸಮುದಾಯದ ಶಶಿಕಲಾ ಎಂಬ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಆಕೆ ಎಂದಿಗೂ ಬಡ್ಡಿ ವ್ಯವಹಾರ ನಡೆಸುತ್ತಿರಲಿಲ್ಲ. ಪತಿ ಸೈನಿಕರಾಗಿದ್ದು, ಇಬ್ಬರು ಪುಟ್ಟ ಹೆಣ್ಣುಮಕ್ಕಳು ಇದ್ದುದ್ದರಿಂದ ಪರಿಚಯದ ಹಿನ್ನೆಲೆಯಲ್ಲಿ ಸ್ನೇಹಿತೆ ತೇಜಾ ಎಂಬುವರ ಬಳಿ ಹಣಕಾಸಿನ ವ್ಯವಹಾರ ಇಟ್ಟುಕೊಂಡಿದ್ದರು. ಆದರೆ ಆಕೆಯ ಹಣ ಕೊಡುವುದಾಗಿ ಹೇಳಿ ಕೊಲೆ ಮಾಡಿರುವುದು ಖಂಡನೀಯ. ಕೂಡಲೇ ಜಿಲ್ಲಾಡಳಿತ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಲಿತರನ್ನು ದಮನಿಸುವ ಯತ್ನಗಳನ್ನು ಮಾಡುತ್ತಿದ್ದಾರೆ. ಕೊಲೆ ಮಾಡಿರುವ ಬಗ್ಗೆ ಪ್ರತ್ಯಕ್ಷ ಸಾಕ್ಷಿಗಳು ಕಣ್ಣೆದುರೇ ಇದ್ದರೂ ನೆಪ ಮಾತ್ರಕ್ಕೆ ಇಬ್ಬರನ್ನು ಬಂಧಿಸಿದ್ದಾರೆ ವಿನಾ ಅವರಿಗೆ ಶಿಕ್ಷೆ ನೀಡಿಲ್ಲ ಎಂದು ದೂರಿದರು.