ಹಾಸನ: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ತುರ್ತು ಚಿಕಿತ್ಸಾ ಘಟಕದಲ್ಲಿ ಮೃತದೇಹವನ್ನಿಟ್ಟು ಖಾಸಗಿ ಆಸ್ಪತ್ರೆ ವೈದ್ಯ ಹಾಗೂ ಆಸ್ಪತ್ರೆ ಸಿಬ್ಬಂದಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮೃತ ವ್ಯಕ್ತಿಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ವಿವರ
ಹಾಸನದ ಜನಪ್ರಿಯ ಆಸ್ಪತ್ರೆಯೊಂದರಲ್ಲಿ ಈ ಘಟನೆ ನಡೆದಿದೆ. ಏ. 4ರಂದು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರ ಸಮೀಪ ಅಪಘಾತವೊಂದರಲ್ಲಿ ಸುಬ್ಬೆಗೌಡ ಎಂಬುವರು ಗಾಯಗೊಂಡಿದ್ದರು. ತಕ್ಷಣ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಳೆದೆರಡು ದಿನಗಳ ಹಿಂದೆಯೇ ಅವರು ಮೃತಪಟ್ಟಿದ್ದಾರೆ. ಮೃತಪಟ್ಟ ವಿಚಾರವನ್ನು ಪೋಷಕರಿಗೆ ತಿಳಿಸದೆ ತುರ್ತು ಚಿಕಿತ್ಸಾ ಘಟಕದಲ್ಲಿ ಮೃತದೇಹವನ್ನಿಡಲಾಗಿದೆ. ಈ ಮೂಲಕ ಹಣ ವೈದ್ಯರು ವಸೂಲಿ ಮಾಡುತ್ತಿದ್ದಾರೆ ಎಂದು ಮೃತನ ಪೋಷಕರು ಆರೋಪಿಸಿದ್ದಾರೆ.
ಈ ಕುರಿತು ಸುಬ್ಬೆಗೌಡರ ಸಂಬಂಧಿಕರು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ವೈದ್ಯ ಅಬ್ದುಲ್ ಬಷೀರ್ ಎಂಬುವರನ್ನು ಪ್ರಶ್ನೆ ಮಾಡಲು ಮುಂದಾದಾಗ ಹಣದ ಆಮಿಷವೊಡ್ಡಿ ಇದನ್ನು ಬಹಿರಂಗಪಡಿಸಬೇಡಿ, ನಿಮಗೆ ಎಲ್ಲಾ ರೀತಿಯ ಸಹಾಯ ಮಾಡಿಕೊಡುತ್ತೇನೆ ಎಂದು ಉಡಾಫೆ ಉತ್ತರ ನೀಡಿ ಸಮಾಧಾನಪಡಿಸಲು ಮುಂದಾಗಿದ್ದಾರೆ ಎಂಬ ಆರೋಪವಿದೆ.
ಈ ಕುರಿತು ವಿಡಿಯೋ ಮಾಡಿ ಸುಬ್ಬೆಗೌಡನ ಸಂಬಂಧಿಕರಾದ ಉಬರ್ ಚಾಲಕ ಸಂಘದ ಅಧ್ಯಕ್ಷ ಮಳ್ಳೆಕೊಪ್ಪಲು ಜಗದೀಶ್ ದೊಡ್ಡೇಗೌಡ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋದಲ್ಲಿ ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತನ ಪೋಷಕರು ಹಾಸನ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನನ್ವಯ ಪೊಲೀಸರು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ ಕೆಲವರನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.