ಹಾಸನ: ಜಮೀನಿನ ವಿಚಾರಕ್ಕೆ ದಾಯಾದಿಗಳ ನಡುವೆ ಕಲಹ ಉಂಟಾಗಿ ವ್ಯಕ್ತಿಯೊಬ್ಬನನ್ನ ಕೊಲೆ ಮಾಡಿದ್ದ ತಾಯಿ, ಮಗ ಮತ್ತು ಮಗಳನ್ನು ಬಂಧಿಸುವಲ್ಲಿ ಜಿಲ್ಲೆಯ ಚನ್ನರಾಯಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಮು ಅಲಿಯಾಸ್ ಮೆಂಟಲ್ ರಾಮು (23) ಛಾಯಾ ಮಣಿ (50) ಹಾಗೂ ಶೃತಿ (28) ಕೊಲೆ ಮಾಡಿದ್ದ ಆರೋಪಿಗಳು. ಜಮೀನಿನ ವಿಚಾರ ಹಾಗೂ ಜಾನುವಾರುಗಳನ್ನು ಜಮೀನಿನಲ್ಲಿ ಮೇಯಿಸುವ ವಿಚಾರವಾಗಿ ನಡೆದ ಜಗಳ ತಾರಕಕ್ಕೇರಿ ಮಂಜುನಾಥ್ ಎಂಬಾತನಿಗೆ ಚೂರಿಯಿಂದ ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಇರಿದು ಕೊಲೆ ಮಾಡಿದ್ದರು.
ಈ ಸಂಬಂಧ ತನಿಖೆಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಹಾಗೂ ಡಿವೈಎಸ್ಪಿ ಲಕ್ಷ್ಮೇಗೌಡ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು. ಆರೋಪಿಗಳಾದ ತಾಯಿ, ಮಗ ಮತ್ತು ಮಗಳನ್ನು ಅರಸೀಕೆರೆ ತಾಲೂಕಿನ ಗಂಡಸಿ ಬಸ್ ನಿಲ್ದಾಣದ ಬಳಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.