ಹಾಸನ: ಮಾಂಸಕ್ಕಾಗಿ ಜಿಂಕೆಯನ್ನು ಬೇಟೆಯಾಡಿದ್ದ ಆರೋಪಿ ರೆಸಾರ್ಟ್ ಮಾಲೀಕನನ್ನು ಬಂಧಿಸಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಅಚ್ಚನಹಳ್ಳಿಯಲ್ಲಿ ರೆಸಾರ್ಟ್ ಮಾಲೀಕ ಶಿಶಿರ್ (36) ಬಂಧಿತ ಆರೋಪಿ.
ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು ದಾಳಿ ನಡೆಸಿ ಜಿಂಕೆ ಬೇಟೆಯಾಡಲು ಬಳಸಿದ್ದ ಗನ್, ಸರಕು ವಾಹನ, ಕಾರು, ದ್ವಿಚಕ್ರ ವಾಹನ ಸೇರಿದಂತೆ 12 ಕೆ.ಜಿ ಬೇಯಿಸಿದ ಮತ್ತು ಹಸಿ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಶಿಶಿರ್ಗೆ ಜಿಂಕೆ ಬೇಟೆಯ ವೇಳೆ ಸಾಥ್ ನೀಡಿದ್ದ ಆರೋಪಿಗಳಾದ ಅವಿನಾಶ್, ಜೀವನ್ ಹಾಗೂ ಕೀರ್ತನ್ ಎಂಬುವರು ನಾಪತ್ತೆಯಾಗಿದ್ದಾರೆ. ಇವರ ಸೆರೆಗೆ ಅರಣ್ಯ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಈ ಪ್ರದೇಶದಲ್ಲಿ ಜಿಂಕೆಗಳ ಬೇಟೆ ಸಾಮಾನ್ಯವಾಗಿದೆ. ಬೇಟೆ ತಪ್ಪಿಸಬೇಕಾದರೆ ಅರಣ್ಯ ಸಿಬ್ಬಂದಿ ಈ ಪ್ರದೇಶದಲ್ಲಿ ಗಸ್ತು ಹೆಚ್ಚಳ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಈ ಸಂಬಂಧ ಸಕಲೇಶಪುರ ಉಪ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಅಭಯಾರಣ್ಯ ಪ್ರವೇಶ ಮತ್ತು ಸೆಕ್ಷನ್ 4ರ ಅಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನವಿಲು, ಜಿಂಕೆ ಬೇಟೆಯಾಡಿ ಮಾಂಸ ಮಾರಾಟ: ಮೂವರ ಬಂಧನ, ಮಾಂಸ ಜಪ್ತಿ