ಹಾಸನ: ದೇಶದಲ್ಲಿ ಬಿಜೆಪಿ ಪಕ್ಷ ಪ್ರಬಲವಾಗಿ ಬೆಳೆದಿದೆ. ನರೇಂದ್ರ ಮೋದಿ ಕಾಲದಲ್ಲಿ 23 ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದೆ. ಕುಮಾರಸ್ವಾಮಿ ಅವರದ್ದು ಯೋಗ್ಯವಾದಂತಹ ಹೇಳಿಕೆ ಅಲ್ಲ. ಅದು ಹಾಸ್ಯಾಸ್ಪದ ಹೇಳಿಕೆ ಎಂದ ಡಿಸಿಎಂ ಕಾರಜೋಳ ತಿರುಗೇಟು ನೀಡಿದ್ದಾರೆ.
ಹಾಸನದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಹೇಳಿದಾಗ ಎಲ್ಲರೂ ಹಾಸ್ಯ ಮಾಡುತ್ತಿದ್ದರು. ಇವತ್ತು ಕಾಂಗ್ರೆಸ್ ಮುಕ್ತ ದೇಶವಾಗಿದೆ. ಈಗ ಪಂಜಾಬ್ ರಾಜ್ಯ ಬಿಟ್ಟರೆ ಕಾಂಗ್ರೆಸ್ ಎಲ್ಲಿದೆ ಹೇಳಿ ನೋಡೋಣ ಎಂದರು.
ಸಚಿವ ಸುಧಾಕರ್ ವಿರುದ್ಧ ಶಾಸಕ ರೇಣುಕಾಚಾರ್ಯ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯಲ್ಲಾಗಲಿ, ಸರ್ಕಾರದಲ್ಲಾಗಲಿ ಯಾವುದೇ ಗೊಂದಲವಿಲ್ಲ. ಅಸಮಾಧಾನ ಇದ್ದರೆ, ಕೆಲಸಗಳಲ್ಲಿ ತೊಂದರೆಯಿದ್ದರೆ ಸಿಎಂ ಜೊತೆ ಮಾತನಾಡಿ ಬಗೆಹರಿಸಿಕೊಳ್ಳಲಿ. ಪಕ್ಷದ ಶಾಸಕರಲ್ಲಿ ನಾನು ಮನವಿ ಮಾಡುತ್ತೇನೆ ಎಂದರು.
ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸಂಕಷ್ಟಗಳ ಸರಮಾಲೆ ಎದುರಿಸಿದ್ದೇವೆ. ಅಧಿಕಾರ ವಹಿಸಿಕೊಂಡ ಕೂಡಲೇ ಪ್ರವಾಹದಿಂದ 35 ಸಾವಿರ ಕೋಟಿ ಹಾನಿಯಾಗಿತ್ತು. ರಸ್ತೆ, ಮನೆ, ಸಾರ್ವಜನಿಕ ಆಸ್ತಿಪಾಸ್ತಿಗಳು ನಷ್ಟವಾಯಿತು. 20-21ನೇ ಸಾಲಿನಲ್ಲಿ ಮತ್ತೆ ಮಳಿಯಿಂದ 25 ಸಾವಿರ ಕೋಟಿ ನಷ್ಟವಾಗಿದೆ. ಕಳೆದ ವರ್ಷ ಜನವರಿಯಿಂದ ಕೊರೊನಾ ಸಂಕಷ್ಟ ಎದುರಾಯ್ತು. ಇಡೀ ದೇಶದಲ್ಲಿ ರಾಜ್ಯ ಸರ್ಕಾರ ಜನರಿಗೆ ಹೆಚ್ಚು ತೊಂದರೆ ಆಗದ ರೀತಿಯಲ್ಲಿ ನಿರ್ವಹಣೆ ಮಾಡಿದೆ. ಕೊರೊನಾದಿಂದ ವ್ಯಾಪಾರಸ್ಥರು, ಜನಸಾಮಾನ್ಯರು ಸಂಕಷ್ಟಕ್ಕೆ ಈಡಾಗಿದ್ದರು ಎಂದರು.
ಇದನ್ನೂ ಓದಿ: ಕರ್ನಾಟಕದಲ್ಲಿ ಬಿಜೆಪಿಗೆ ಲೈಫ್ ಕೊಟ್ಟಿದ್ದು ನಾನೇ: ಕುಮಾರಸ್ವಾಮಿ