ಹಾಸನ: ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಸಣ್ಣ ನೀರಾವರಿ ಇಲಾಖೆಯ ಗಂಗಾ ಕಲ್ಯಾಣ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ ಎಲ್ಲ ದಲಿತರಿಗೆ ಕೊಳವೆ ಬಾವಿ ಕೊರೆಯಿಸಿ, ಎಸ್.ಸಿ.ಎಸ್.ಪಿ./ಟಿ.ಎಸ್.ಪಿ. ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿಯಿಂದ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಇನ್ನು ಪ್ರತಿಭಟನೆಯಲ್ಲಿ ದಲಿತ ಹಕ್ಕುಗಳ ಸಮಿತಿಯ ರಾಜ್ಯ ಸಂಚಾಲಕ, ಗೋಪಾಲಕೃಷ್ಣ ಮಾತನಾಡಿ, ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸಾಲ ಸೌಲಭ್ಯಕ್ಕೆ ಪ್ರತಿ ವರ್ಷ ಅರ್ಜಿ ಸಲ್ಲಿಸುವ ಪದ್ಧತಿ ರದ್ದು ಮಾಡಿ ಎಲ್ಲ ಅರ್ಹರಿಗೂ ಸೌಲಭ್ಯ ಸಿಗಬೇಕು ಎಂದರು. ಎಸ್.ಸಿ./ಎಸ್.ಟಿ ಯೋಜನೆಯನ್ನು ಜನಸಂಖ್ಯೆ ಆಧಾರದಲ್ಲಿ ಸಮರ್ಪಕವಾಗಿ ಜಾರಿಗೊಳಿಸಬೇಕು. ಬೇಜವಬ್ದಾರಿ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆ ಅನುಗುಣವಾಗಿ ನಿಗಮಕ್ಕೆ ಅನುದಾನ ನೀಡಬೇಕು ಹಾಗೂ ಕೇಂದ್ರ ಸರಕಾರದ ನೀತಿಯನ್ನು ಆಯೋಗ ಕೈ ಬಿಡಬೇಕು. ದಲಿತರ ಅಭಿವೃದ್ಧಿ ಹಣ ಕಡಿತ ಮಾಡುವುದನ್ನು ನಿಲ್ಲಿಸಬೇಕು. ಸಫಾಯಿ ಕರ್ಮಚಾರಿ ಕುಟುಂಬಗಳ ಅಭಿವೃದ್ಧಿಗೆ ಇರುವ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
.